ಸಾಗರ: ರಾಜ್ಯದಲ್ಲಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣೆಯ ಜವಾಬ್ದಾರಿಯನ್ನು ನೀಡುವುದನ್ನು ವಿರೋಧಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಶಿವಮೊಗ್ಗ ಜಿಲ್ಲಾ ಘಟಕವು ರಾಜ್ಯ ಸರ್ಕಾರಕ್ಕೆ ಮಹತ್ವದ ಮನವಿಯೊಂದನ್ನು ಸಲ್ಲಿಸಿದೆ. ಮುಂಬೈನ "ಟಾಟಾ ಪವರ್ ಕಂಪನಿ ಲಿಮಿಟೆಡ್" ಸಂಸ್ಥೆಯು ಕರ್ನಾಟಕದಲ್ಲಿ ವಿದ್ಯುತ್ ವಿತರಣೆ ಮಾಡಲು ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ, ಸಾಗರದ ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಈ ಮನವಿಯನ್ನು ರವಾನಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಹಾಗೂ ಚೆಸ್ಕಾಂ ವ್ಯಾಪ್ತಿಯ ಹೆಚ್ಚು ಆದಾಯವಿರುವ 19 ಜಿಲ್ಲೆಗಳಲ್ಲಿ ಸಮನಾಂತರವಾಗಿ ವಿದ್ಯುತ್ ವಿತರಣೆ ಮಾಡಲು ಟಾಟಾ ಪವರ್ ಕಂಪನಿಯು ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಹೊರಡಿಸಲಾದ ಇತ್ತೀಚಿನ ಪತ್ರಿಕಾ ಪ್ರಕಟಣೆಯು ಇಲಾಖೆಯ ನೌಕರರು ಹಾಗೂ ಗ್ರಾಹಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ವಿದ್ಯುತ್ ಕ್ಷೇತ್ರವು ಇದುವರೆಗೆ ಸರ್ಕಾರದ ಹಿಡಿತದಲ್ಲಿದ್ದ ಕಾರಣಕ್ಕಾಗಿಯೇ ಗ್ರಾಮೀಣ ವಿದ್ಯುದೀಕರಣ, ನೀರಾವರಿಗೆ ಉಚಿತ ವಿದ್ಯುತ್, ಭಾಗ್ಯ-ಜ್ಯೋತಿ ಮತ್ತು ಕುಟೀರ ಜ್ಯೋತಿಯಂತಹ ಹತ್ತಾರು ಜನಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯವಾಗಿದೆ ಎಂದು ಕನ್ನಡ ಸೇನೆ ನೆನಪಿಸಿದೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ವಿದ್ಯುತ್ ಕ್ಷೇತ್ರವು ಸರ್ಕಾರದ ನಿಯಂತ್ರಣದಲ್ಲೇ ಇರಬೇಕು. ಕೇವಲ ಲಾಭ ಗಳಿಕೆಯನ್ನು ಮಾತ್ರ ಉದ್ದೇಶವಾಗಿಟ್ಟುಕೊಂಡಿರುವ ಖಾಸಗಿ ಸಂಸ್ಥೆಗಳಿಂದ ಇಂತಹ ಜನಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಹಾಗೂ ಸರ್ಕಾರಿ ಸ್ವಾಮ್ಯದಲ್ಲಿದ್ದಾಗ ಮಾತ್ರ ಸಾರ್ವಜನಿಕ ಹಿತಾಸಕ್ತಿ ಕಾಯಲು ಸಾಧ್ಯ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಾರ್ವಜನಿಕರ ತೆರಿಗೆ ಹಣದಿಂದ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ಮೂಲಸೌಕರ್ಯ ಹಾಗೂ ವಿದ್ಯುತ್ ವಿತರಣಾ ಜಾಲವನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದು ಸರ್ಕಾರ ತನ್ನ ಹಿಡಿತವನ್ನು ತಾನೇ ಕಳೆದುಕೊಂಡಂತೆ ಆಗುತ್ತದೆ. ಅಷ್ಟೇ ಅಲ್ಲದೆ, ಖಾಸಗಿ ಸಂಸ್ಥೆಗಳು ನೇಮಕಾತಿಯಲ್ಲಿ ಸರ್ಕಾರದ ಮೀಸಲಾತಿ ನೀತಿಯನ್ನು ಪಾಲಿಸುವುದಿಲ್ಲವಾದ್ದರಿಂದ ಶೋಷಿತ ಕೆಳ ಸಮುದಾಯದ ವರ್ಗಗಳಿಗೆ ಉದ್ಯೋಗಾವಕಾಶಗಳು ವಂಚಿತವಾಗುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಗ್ರಾಹಕರು, ಕೈಗಾರಿಕೆಗಳು, ರೈತರು ಮತ್ತು ಇಲಾಖೆಯ ನೌಕರರ ಹಿತದೃಷ್ಟಿಯಿಂದ ವಿದ್ಯುಚ್ಛಕ್ತಿ ಕಾಯ್ದೆ 2003ರ ಸೆಕ್ಷನ್ 108 ರನ್ವಯ ತನಗಿರುವ ವಿಶೇಷ ಅಧಿಕಾರವನ್ನು ಚಲಾಯಿಸಿ, ಟಾಟಾ ಪವರ್ ಕಂಪನಿಯ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಕನ್ನಡ ಸೇನೆ ತೀವ್ರವಾಗಿ ಒತ್ತಾಯಿಸಿದೆ.
Kshetra Samachara
20/06/2026 04:06 pm