ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟನ ಫುಟ್‌ಪಾತ್ ನಿದ್ರೆ : ವೈರಲ್ ವಿಡಿಯೋ ಹಿಂದಿನ ಕಥೆ ಏನು?

ತಮ್ಮ ಅದ್ಭುತ ಕಾಮಿಡಿ ಟೈಮಿಂಗ್ ಮತ್ತು ವಿಶಿಷ್ಟ ನಟನೆಯ ಮೂಲಕ ಇಡೀ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿರುವ ಖ್ಯಾತ ನಟ ಹಾಗೂ ಕಾಮಿಡಿಯನ್ ಸುನಿಲ್ ಗ್ರೋವರ್ (ಕಪಿಲ್ ಶರ್ಮಾ ಶೋ ಖ್ಯಾತಿಯ ಡಾ. ಮಶೂರ್ ಗುಲಾಟಿ) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಏನಾದರೊಂದು ವಿಭಿನ್ನ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಈ ಬಾರಿ ಅವರು ಹಂಚಿಕೊಂಡಿರುವ ವಿಡಿಯೋ ಕಂಡು ಅವರ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ!

ಹೌದು, ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟ ಸುನಿಲ್ ಗ್ರೋವರ್, ಉತ್ತರಾಖಂಡದ ಪವಿತ್ರ ನಗರಿ ಋಷಿಕೇಶದ ಗಂಗಾ ನದಿಯ ಘಾಟ್‌ನಲ್ಲಿ (ತ್ರಿವೇಣಿ ಘಾಟ್) ಸಾಮಾನ್ಯ ಜನರಂತೆ ಫುಟ್‌ಪಾತ್ ಮೇಲೆ ಮಲಗಿರುವ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಖುದ್ದಾಗಿ ಸುನಿಲ್ ಗ್ರೋವರ್ ಅವರೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾತ್ರಿಯ ಸಮಯದಲ್ಲಿ ಗಂಗಾ ನದಿಯ ತಟದಲ್ಲಿ ಉಳಿದ ಭಕ್ತಾದಿಗಳು ಮತ್ತು ನಿರಾಶ್ರಿತರ ಜೊತೆಗೆ ಸುನಿಲ್ ಅವರು ಕೂಡ ನೆಲದ ಮೇಲೊಂದು ಸಣ್ಣ ಚಾದರ ಹಾಸಿಕೊಂಡು, ತೆರೆದ ಆಕಾಶದ ಕೆಳಗೆ ಅತ್ಯಂತ ನಿರಾಳವಾಗಿ ಮಲಗಿ ನಿದ್ರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಿನ್ನೆಲೆಯಲ್ಲಿ 'ಜೈ ಕಾಲ್ ಮಹಾಕಾಲ್' ಎಂಬ ಭಕ್ತಿಗೀತೆಯನ್ನು ಹಾಕಿ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಸುನಿಲ್ ಗ್ರೋವರ್, ಇದಕ್ಕೆ "ತಾರೆ ಜಮೀನ್ ಪರ್" (ನೆಲದ ಮೇಲಿಳಿದ ನಕ್ಷತ್ರಗಳು) ಎಂದು ಕ್ಯಾಪ್ಷನ್ ನೀಡಿದ್ದಾರೆ. ಕೇವಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಸುನಿಲ್ ಗ್ರೋವರ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರನ್ನು ಎರಡು ಬಣಗಳನ್ನಾಗಿ ಮಾಡಿದೆ. ಒಂದು ಕಡೆ, ಸುನಿಲ್ ಗ್ರೋವರ್ ಅವರ ಈ ಸರಳತೆಯನ್ನು ಕಂಡು ಅಭಿಮಾನಿಗಳು ಮನಸೋತಿದ್ದಾರೆ. "ಎಷ್ಟೇ ಹಣ, ಕೀರ್ತಿ ಬಂದರೂ ಇಷ್ಟೊಂದು ಸರಳವಾಗಿರಲು ನಿಮ್ಮಿಂದ ಮಾತ್ರ ಸಾಧ್ಯ" ಎಂದು ಹೊಗಳಿದ್ದಾರೆ. ಇನ್ನು ಕೆಲವರು "ತಾರೆ ಜಮೀನ್ ಪರ್ ಅಲ್ಲ ಸಾರ್, ಸಿತಾರೆ ಜಮೀನ್ ಪರ್ (ನಕ್ಷತ್ರ ನೆಲದ ಮೇಲೆ ಬಂದಿದೆ)" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ, ಕೆಲವು ನೆಟ್ಟಿಗರು ಇದನ್ನು ಕೇವಲ 'ಸೋಷಿಯಲ್ ಮೀಡಿಯಾ ಗಿಮಿಕ್' ಅಥವಾ 'ನಟನೆ' ಎಂದು ತಮಾಷೆ ಮಾಡುತ್ತಿದ್ದಾರೆ. "ವಿಡಿಯೋ ಶೂಟ್ ಮಾಡಿದ್ದಾಯ್ತು ಅಲ್ವಾ ಸರ್, ಇನ್ ಎದ್ದು ಫೈವ್ ಸ್ಟಾರ್ ಹೋಟೆಲ್‌ಗೆ ಹೋಗಿ ಮಲಗಿ" ಎಂದು ಕೆಲವರು ಕಾಲೆಳೆದರೆ, "ಕ್ಯಾಮೆರಾಮನ್ ವಿಡಿಯೋ ರೆಕಾರ್ಡ್ ಮಾಡೋವರೆಗೂ ಕಣ್ಣು ಮುಚ್ಚಿಕೊಂಡಿರಿ" ಎಂದು ಇನ್ನು ಕೆಲವರು ಹಾಸ್ಯಮಯ ಕಮೆಂಟ್‌ಗಳನ್ನು ಮಾಡಿದ್ದಾರೆ.

ಸುನಿಲ್ ಗ್ರೋವರ್ ಈ ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅವರು ರಸ್ತೆ ಬದಿಯಲ್ಲಿ ಬಟ್ಟೆ ಇಸ್ತ್ರಿ ಮಾಡುವುದು, ಹ್ಯಾಂಡ್ ಪಂಪ್‌ನಲ್ಲಿ ಬಟ್ಟೆ ಒಗೆಯುವುದು, ಹಳ್ಳಿಯ ಒಲೆಯ ಮೇಲೆ ರೊಟ್ಟಿ ಸುಡುವುದು ಮತ್ತು ಬೀದಿಯಲ್ಲಿ ತರಕಾರಿ ಮಾರುವವರ ಜೊತೆ ಕುಳಿತುಕೊಳ್ಳುವ ವಿಡಿಯೋಗಳನ್ನು ಹಂಚಿಕೊಂಡು ಜನರ ಮನಸ್ಸು ಗೆದ್ದಿದ್ದರು.

ಒಟ್ಟಿನಲ್ಲಿ, ಸರಳ ಜೀವನಶೈಲಿಯನ್ನು ಪ್ರದರ್ಶಿಸುವ ಅವರ ಈ ವೀಡಿಯೊಗಳು ಸದಾ ವೈರಲ್ ಆಗುತ್ತಿರುತ್ತವೆ. ಈ ಬಾರಿ ಗಂಗಾ ತಟದಲ್ಲಿ ಮಲಗಿರುವ ಅವರ ವಿಡಿಯೋ ಮಾತ್ರ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

Edited By : Nirmala Aralikatti
PublicNext

PublicNext

19/06/2026 06:09 pm

Cinque Terre

9.24 K

Cinque Terre

0