ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಟ ವಿಜಯ್ ಅವರನ್ನು ನಟಿ ಸಮಂತಾ ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ. ಚೆನ್ನೈನಲ್ಲಿರುವ ದಳಪತಿ ನಿವಾಸಕ್ಕೆ ತೆರಳಿದ ಸಮಂತಾ, ಅವರಿಗೆ ವೈಯಕ್ತಿಕವಾಗಿ ಶುಭಾಶಯ ಕೋರಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ವಿಜಯ್ ಮತ್ತು ಸಮಂತಾ ‘ಥೇರಿ’, ‘ಕತ್ತಿ’ ಹಾಗೂ ‘ಮರ್ಸೆಲ್’ ಸೇರಿದಂತೆ ಮೂರು ತಮಿಳು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ತೆರೆಯ ಮೇಲೆ ಅವರ ಜೋಡಿಯನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದರು. ಈಗ ಅವರ ಬಾಂಧವ್ಯ ಸಿನಿಮಾಗಳ ಗಡಿಯನ್ನು ಮೀರಿ ಬೆಳೆದಿದೆ. ಸದ್ಯ ‘ಮಾ ಇಂಟಿ ಬಂಗಾರಂ’ ಚಿತ್ರದ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಸಮಂತಾ, ಚೆನ್ನೈಗೆ ತೆರಳಿದ ಕೂಡಲೇ ಮೊದಲು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ.
ಭೇಟಿಯ ವೇಳೆ ವಿಜಯ್ ಮತ್ತು ಸಮಂತಾ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳು ಈ ಭೇಟಿಯ ಮಹತ್ವವನ್ನು ಸಾರುತ್ತವೆ. ಮುಖ್ಯಮಂತ್ರಿಯಾದ ನಂತರ ವಿಜಯ್ ಅವರು ಭವಿಷ್ಯದಲ್ಲಿ ಸಿನಿಮಾಗಳಲ್ಲಿ ನಟಿಸಲಿ ಬಿಡಲಿ, ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ ಎಂಬುದಕ್ಕೆ ಸಮಂತಾ ಅವರೊಂದಿಗಿನ ಈ ಭೇಟಿಯೇ ಸಾಕ್ಷಿ.
ಕೆಲಸದ ಒತ್ತಡದ ನಡುವೆಯೂ ವಿಜಯ್ ಅವರು ಸಮಂತಾ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ನಂತರ ಸಮಂತಾ, ವಿಜಯ್ ಕುರಿತು ತಮ್ಮ ಪ್ರೀತಿ ಮತ್ತು ಮೆಚ್ಚುಗೆಯ ನುಡಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗುವ ಮೊದಲಿನಿಂದಲೂ ವಿಜಯ್ ಅವರನ್ನು ಬಲ್ಲ ಸಮಂತಾ, ಅವರ ಹಿಂದಿನ ಕನಸುಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮನದಾಳದ ಮಾತುಗಳನ್ನು ಬರೆದಿದ್ದಾರೆ.
ಸಮಂತಾ ಅವರ ಮನದಾಳದ ಮಾತು
"ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದೇನೆ ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಅಪಾರ ಸಂತೋಷವನ್ನು ಮೂಡಿಸಿತ್ತು. ವಿಜಯ್ ಸರ್ ಕೇವಲ ಚಿತ್ರರಂಗದ ನಾಯಕನಾಗಿಯೇ ಉಳಿಯುವ ವ್ಯಕ್ತಿಯಲ್ಲ ಎಂದು ನಾನು ಯಾವಾಗಲೂ ಭಾವಿಸುತ್ತಿದ್ದೆ. ಅವರಲ್ಲಿರುವ ಶಕ್ತಿ, ವ್ಯಕ್ತಿತ್ವ ಮತ್ತು ಜನರು ಅವರಿಗೆ ನೀಡುವ ಪ್ರತಿಕ್ರಿಯೆಯನ್ನು ನೋಡಿದರೆ, ಅವರು ಇನ್ನೂ ದೊಡ್ಡ ಉದ್ದೇಶಕ್ಕಾಗಿ ಹುಟ್ಟಿದವರಂತೆ ಅನಿಸುತ್ತದೆ. ಈಗಾಗಲೇ ತಾವು ಸಾಧಿಸಿರುವ ಕ್ಷೇತ್ರವನ್ನು ಬಿಟ್ಟು, ಅದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಮತ್ತು ಸವಾಲುಗಳಿರುವ ದಾರಿಯನ್ನು ಆರಿಸಿಕೊಳ್ಳುವುದು ನಿಜಕ್ಕೂ ಅಸಾಮಾನ್ಯ. ಅದು ಸುಲಭದ ಹಾದಿಯಲ್ಲ ಎಂದು ಅವರು ಒಪ್ಪಿಕೊಂಡಿದ್ದರು. ಬದಲಾವಣೆಯನ್ನು ತರಬಹುದು ಎಂಬ ನಂಬಿಕೆಯಿಂದಲೇ ಅವರು ಈ ಹೊಸ ಕ್ಷೇತ್ರಕ್ಕೆ ಬಂದಿದ್ದಾರೆ.
ನನ್ನ ಅಭಿಪ್ರಾಯದಲ್ಲಿ, ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಬಗ್ಗೆ ಮಾತ್ರವಲ್ಲದೆ, ಸಮಾಜಕ್ಕೆ ತಾವು ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಯೋಚಿಸುವ ಅವಕಾಶ ಸಿಗುತ್ತದೆ. ಆದರೆ ಹಲವರು ಆ ದಾರಿಯನ್ನು ಸ್ವೀಕರಿಸುವುದಿಲ್ಲ. ವಿಜಯ್ ಸರ್ ತಮ್ಮ ಹುದ್ದೆಯನ್ನು ಸ್ಪಷ್ಟ ಉದ್ದೇಶ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಾರೆ ಎಂಬ ನಂಬಿಕೆ ನನಗಿದೆ. ಇದರಿಂದ ಅವರು ಜನರನ್ನೇ ಮತ್ತೊಮ್ಮೆ ಆಶ್ಚರ್ಯಪಡಿಸುತ್ತಾರೆ ಎಂಬ ಭರವಸೆಯಿದೆ. ಅವರಿಗೆ ಶಕ್ತಿ, ಜ್ಞಾನ ಮತ್ತು ತಮ್ಮ ಮಾರ್ಗದಲ್ಲಿ ದೃಢವಾಗಿ ಮುಂದುವರಿಯುವ ಧೈರ್ಯ ದೊರಕಲಿ ಎಂದು ಹಾರೈಸುತ್ತೇನೆ. ಅವರನ್ನು ನೋಡುತ್ತಿರುವ ಪ್ರತಿಯೊಬ್ಬ ಯುವಕರಿಗೂ ಇದು ಒಂದು ಸ್ಫೂರ್ತಿಯಾಗಲಿ ಜೀವನವು ನಾವು ಆರಂಭದಲ್ಲಿ ಕಂಡ ಕನಸಿಗಿಂತಲೂ ಬಹಳ ದೊಡ್ಡದಾಗಿರಬಹುದು ಎಂದು ಬರೆದುಕೊಂಡಿದ್ದಾರೆ.
PublicNext
19/06/2026 01:42 pm