ಬೆಂಗಳೂರು : ಪ್ರೀತಿಯ ವಿಭಿನ್ನ ಆಯಾಮಗಳನ್ನು ಹೊತ್ತು ಬರುತ್ತಿರುವ "ಲವ್ ಸೀಸನ್ಸ್" ಚಿತ್ರದ ಮೂರು ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಬಿಡುಗಡೆಯಾದ ಅಲ್ಪಾವಧಿಯಲ್ಲೇ ಕೇಳುಗರಿಂದ ಭರಪೂರ ಪ್ರತಿಕ್ರಿಯೆ ಪಡೆದುಕೊಂಡಿರುವ ಚಿತ್ರತಂಡ, ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಹಾಡುಗಳ ಗೆಲುವಿನ ಸಿಹಿಯನ್ನು ಹಂಚಿಕೊಂಡಿದೆ. ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ್ (ನೀಲೇರಿ) ನಿರ್ಮಿಸಿರುವ ಈ ಸಿನಿಮಾ ಇದೇ ಜುಲೈ 3ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಗೀತಸಾಹಿತಿ ಕೆ. ಕಲ್ಯಾಣ್ ಚಿತ್ರತಂಡಕ್ಕೆ ಶುಭ ಹಾರೈಸುತ್ತಾ, ಹಾಡುಗಳು ಯಾವತ್ತಿಗೂ ಚಿತ್ರವೊಂದರ ಆಮಂತ್ರಣ ಪತ್ರಿಕೆಯಂತೆ ಕೆಲಸ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು. ಹಿಂದೆಲ್ಲಾ ಆಡಿಯೋ ರಿಲೀಸ್ ಮೂಲಕವೇ ಪ್ರೇಕ್ಷಕರನ್ನು ತಲುಪಲಾಗುತ್ತಿತ್ತು, ಇಂದು ಟ್ರೆಂಡ್ ಬದಲಾಗಿದೆ. ಆದರೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ನೆನಪಿನಲ್ಲಿ ಉಳಿಯುವಂತಹ ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಆರಂಭದಲ್ಲಿ ವೀರ್ ಸಮರ್ಥ್ ಅವರನ್ನು ಬಿಟ್ಟರೆ ಮತ್ಯಾರ ಮುಖ ಪರಿಚಯವಿಲ್ಲದಿದ್ದರೂ, ಎಲ್ಲರೂ ಒಟ್ಟಾಗಿ ಉತ್ತಮ ಹಾಡುಗಳನ್ನು ಸೃಷ್ಟಿಸಿದ ತುಂಬು ಖುಷಿ ನನಗಿದೆ ಎನ್ನುತ್ತಾ ಈ ಪ್ರತಿಭಾನ್ವಿತ ತಂಡಕ್ಕೆ ದೊಡ್ಡ ಗೆಲುವಾಗಲಿ ಎಂದು ಅವರು ಹಾರೈಸಿದರು. ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿರುವ ಪ್ರಮೋದ್ ಮರವಂತೆ ಹಾಗೂ ಸಾಯಿ ಸರ್ವೇಶ್ ಕೂಡ ಈ ಯಶಸ್ವಿ ಆಲ್ಬಂನ ಭಾಗವಾಗಿರುವುದಕ್ಕೆ ತಮ್ಮ ಸಂತಸ ಹಂಚಿಕೊಂಡರು.
ಕೃತ್ವಿಕ್ ನಿರ್ದೇಶನದ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ, ಹುಲಿ ಕಾರ್ತಿಕ್ ಮತ್ತು ಬೇಬಿ ರೀತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಶಾಸ್ತ್ರಿ ಅವರ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನ ಹಾಗೂ ಭಜರಂಗಿ ಮೋಹನ್ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಹಾಡುಗಳ ಮೂಲಕ ಈಗಾಗಲೇ ದೊಡ್ಡ ಭರವಸೆ ಮೂಡಿಸಿರುವ 'ಲವ್ ಸೀಸನ್ಸ್' ತಂಡಕ್ಕೆ ಜುಲೈ 3ರಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹೇಗೆ ಬರಮಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
PublicNext
17/06/2026 06:19 pm