ಬೈಲಹೊಂಗಲ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ ಜಾತಿ ಪ್ರಮಾಣಪತ್ರ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ)ಗಳನ್ನು ಮನೆ ಮನೆಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಬೆಳಗಾವಿ (ಗ್ರಾಮಾಂತರ) ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ ಭಾನುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರವು ಜನಸಾಮಾನ್ಯರಿಗೆ ಅಗತ್ಯ ದಾಖಲೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದೆ. ಮನೆಗಳಿಗೆ ತಲುಪುವ ಜಾತಿ ಪ್ರಮಾಣಪತ್ರಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಟ್ಟುಕೊಳ್ಳಬೇಕು. ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸೇರಿದಂತೆ ವಿವಿಧ ಸರ್ಕಾರಿ ಪ್ರಕ್ರಿಯೆಗಳಲ್ಲಿ ಈ ದಾಖಲೆಗಳು ಉಪಯುಕ್ತವಾಗಲಿದ್ದು, ಪ್ರತಿಯೊಬ್ಬರೂ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಜನಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಯೋಜನೆಯಿಂದ ಅಗತ್ಯ ದಾಖಲೆಗಳು ಸುಲಭವಾಗಿ ಲಭ್ಯವಾಗಲಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಗ್ರಾಮ ಸಹಾಯಕ ಉಮೇಶ ಬೋಗೂರು ಅವರು ಫಲಾನುಭವಿಗಳ ಮನೆಗಳಿಗೆ ತೆರಳಿ ಉಚಿತ ಜಾತಿ ಪ್ರಮಾಣಪತ್ರ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ)ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಡಿವಾಳಪ್ಪ ಅಕ್ಕಿಸಾಗರ, ಕಲ್ಲಯ್ಯ ಮಠಪತಿ, ಮಲಿಕ್ ಗುಡಗುಂಟಿ, ಮಂಜುನಾಥ ಬೈಲವಾಡ, ಉಮೇಶ ಬೈಲವಾಡ, ಪಾರ್ವತಿ ಚಿಕ್ಕಮಠ, ಗ್ರಂಥಪಾಲಕಿ ಕಲಾವತಿ ಪರುನವರ, ಶೋಭಾ ಅಂಬಡಗಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
Kshetra Samachara
02/08/2026 05:58 pm