ಕೊಹತ್ (ಪಾಕಿಸ್ತಾನ) : ನೆರೆಯ ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮಿತಿಮೀರಿದ್ದು, ಮಸೀದಿಯೊಂದರ ಮೇಲೆ ನಡೆದ ಭೀಕರ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 16 ಮಂದಿ ದಾರುಣವಾಗಿ ಮೃತಪಟ್ಟು, 50ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಕೊಹತ್ ಜಿಲ್ಲೆಯಲ್ಲಿರುವ ಪೊಲೀಸ್ ಲೈನ್ಸ್ ಮಸೀದಿಯಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆ (ಜುಮ್ಮಾ ನಮಾಜ್) ನಡೆಯುತ್ತಿದ್ದ ಸಂದರ್ಭದಲ್ಲೇ ಈ ರಕ್ತಪಾತ ನಡೆದಿದೆ.
ಹೌದು ನೂರಾರು ಭಕ್ತರು ಮಧ್ಯಾಹ್ನದ ಪ್ರಾರ್ಥನೆಯಲ್ಲಿ ಮಗ್ನರಾಗಿದ್ದ ವೇಳೆ ಸ್ಫೋಟಕ ತುಂಬಿದ ವಾಹನವನ್ನು ಪೊಲೀಸ್ ಲೈನ್ಸ್ ಆವರಣಕ್ಕೆ ನುಗ್ಗಿಸಿ ಸ್ಫೋಟಿಸಲಾಗಿದೆ. ಸ್ಫೋಟದ ತೀವ್ರತೆಗೆ ಮಸೀದಿಯ ಹೊರಭಾಗ ಹಾಗೂ ಭಾರಿ ಗಾತ್ರದ ಗೋಡೆ ಧರೆಗುರುಳಿದ್ದು, ಹಲವರು ಅವಶೇಷಗಳಡಿ ಸಿಲುಕಿಕೊಂಡರು.
ಭೀಕರ ಸ್ಫೋಟದ ಬೆನ್ನಲ್ಲೇ ಸುತ್ತಮುತ್ತಲಿನ ಕಟ್ಟಡಗಳ ಬಳಿ ಸರಣಿ ಗುಂಡಿನ ಸದ್ದು ಮೊಳಗಿದೆ. ಮಸೀದಿ ಆವರಣಕ್ಕೆ ನುಗ್ಗಲು ಯತ್ನಿಸಿದ ಶಂಕಿತ ಉಗ್ರರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಘಟನಾ ಸ್ಥಳಕ್ಕೆ ‘ರೆಸ್ಕ್ಯೂ 1122’ ತಂಡಗಳು ಧಾವಿಸಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಜಿಲ್ಲಾ ಕೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿ ತಾಹೀರ್ ಅಲಿ ಶಾ ಮಾಹಿತಿ ನೀಡಿ, ಮೃತದೇಹಗಳು ಹಾಗೂ ಗಾಯಾಳುಗಳು ಏಕಕಾಲಕ್ಕೆ ಆಸ್ಪತ್ರೆಗೆ ಹರಿದುಬಂದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ದಾಳಿಯ ಹೊಣೆಯನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ, ಸ್ಥಳೀಯವಾಗಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಥವಾ ಅದರ ಅಂಗಸಂಸ್ಥೆಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಬಳಿಕ ಕೊಹತ್-ಹಂಗು ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಖೈಬರ್ ಪಖ್ತುಂಕ್ವಾ ಮುಖ್ಯಮಂತ್ರಿ ಮುಹಮ್ಮದ್ ಸೊಹೈಲ್ ಅಫ್ರಿದಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲು ಮತ್ತು ಸಮಗ್ರ ತನಿಖಾ ವರದಿ ಸಲ್ಲಿಸಲು ಆದೇಶಿಸಿದ್ದಾರೆ.
PublicNext
19/09/2026 02:16 pm