ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕಾಗೆ ಇರಾನ್ 7 ಷರತ್ತುಗಳ ‘ಅಂತಿಮ ಗಡುವು’: ಒಪ್ಪದಿದ್ದರೆ ನಿರ್ಣಾಯಕ ಯುದ್ಧಕ್ಕೆ ಸಿದ್ಧ ಎಂದ ಟೆಹ್ರಾನ್

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧದ ಬಿಕ್ಕಟ್ಟನ್ನು ಶಾಂತಿಯುತವಾಗಿ ಕೊನೆಗಾಣಿಸಲು ಇರಾನ್ ಅಮೆರಿಕದ ಮುಂದೆ 7 ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ. ಕತಾರ್ ಮೂಲಕ ವಾಷಿಂಗ್ಟನ್‌ಗೆ ಈ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಈ ಷರತ್ತುಗಳನ್ನು ತಿರಸ್ಕರಿಸಿದರೆ ಯಾವುದೇ ಹಂತದ "ನಿರ್ಣಾಯಕ ಯುದ್ಧ" ಎದುರಿಸಲೂ ಸೈ ಎಂದು ಇರಾನ್ ಖಡಕ್ ಎಚ್ಚರಿಕೆ ರವಾನಿಸಿದೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿರುವ ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಝಾಯಿ, "ಕತಾರ್ ಮಧ್ಯಸ್ಥಿಕೆಯಲ್ಲಿ ನಮ್ಮ ಪ್ರಮುಖ ಬೇಡಿಕೆಗಳನ್ನು ಅಮೆರಿಕಕ್ಕೆ ಮುಟ್ಟಿಸಿದ್ದೇವೆ. ಶಾಂತಿ ಸ್ಥಾಪನೆಗಾಗಿ ಅಧ್ಯಕ್ಷ ಟ್ರಂಪ್ ಅವರ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್‌ನ ಪ್ರಮುಖ ಬೇಡಿಕೆಗಳು

ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಮಿಲಿಟರಿ ಸಂಘರ್ಷಗಳಿಗೆ ತಕ್ಷಣವೇ ಪೂರ್ಣವಿರಾಮ ಇಡಬೇಕು.

ಅಮೆರಿಕ ನಿರ್ಬಂಧಿಸಿರುವ (ಫ್ರೀಜ್ ಮಾಡಿರುವ) ಇರಾನ್‌ನ ರಾಷ್ಟ್ರೀಯ ನಿಧಿ ಮತ್ತು ಹಣಕಾಸು ಆಸ್ತಿಗಳನ್ನು ಬಿಡುಗಡೆ ಮಾಡಬೇಕು.

ಇರಾನ್ ಮೇಲೆ ಹೇರಲಾಗಿರುವ ನೌಕಾ ದಿಗ್ಬಂಧನವನ್ನು (Naval Blockade) ಸಂಪೂರ್ಣವಾಗಿ ಹಿಂಪಡೆಯಬೇಕು.

ಇವುಗಳನ್ನೊಳಗೊಂಡಂತೆ ಒಟ್ಟು ಏಳು ಷರತ್ತುಗಳನ್ನು ಶಾಂತಿ ಮಾತುಕತೆಗಾಗಿ ಟೆಹ್ರಾನ್ ಪ್ರಸ್ತಾಪಿಸಿದೆ.

"ಈ ಷರತ್ತುಗಳಿಗೆ ಒಪ್ಪಿಗೆ ನೀಡುವುದು ಸ್ವತಃ ಅಮೆರಿಕದ ಹಿತದೃಷ್ಟಿಯಿಂದಲೇ ಒಳ್ಳೆಯದು. ಟ್ರಂಪ್ ಅವರ ಬೆದರಿಕೆಗಳಿಗೆ ನಾವು ಎಂದಿಗೂ ಬಗ್ಗುವುದಿಲ್ಲ. ಅಗತ್ಯ ಬಿದ್ದರೆ ಪೂರ್ಣ ಪ್ರಮಾಣದ ನಿರ್ಣಾಯಕ ಯುದ್ಧ ನಡೆಸಲು ನಮ್ಮ ಸೇನೆ ಸಕಲ ಸನ್ನದ್ಧವಾಗಿದೆ" ಎಂದು ರೆಝಾಯಿ ಗುಡುಗಿದ್ದಾರೆ.

ಇರಾನ್‌ನ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಬಹುದಾದ ಸಾಧ್ಯತೆಗಳನ್ನು ಅರಿತು ತನ್ನ ರಕ್ಷಣಾ ಯೋಜನೆಗಳನ್ನು ಸಂಪೂರ್ಣ ಮರುಪರಿಷ್ಕರಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪರ್ಷಿಯನ್ ಕೊಲ್ಲಿ, ಓಮನ್ ಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಬೀಡುಬಿಟ್ಟಿರುವ ಅಮೆರಿಕದ ನೌಕಾಪಡೆ ಮತ್ತು ವಿಮಾನವಾಹಿ ಯುದ್ಧ ನೌಕೆಗಳನ್ನೇ ಗುರಿಯಾಗಿಸಿಕೊಂಡು ಇರಾನ್ ಈಗಾಗಲೇ ‘ಮಲ್ಟಿ-ವಾರ್‌ಹೆಡ್’ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಅಮೆರಿಕ ಏನಾದರೂ ತಪ್ಪು ಹೆಜ್ಜೆಯಿಟ್ಟರೆ ಈ ಪ್ರದೇಶದಲ್ಲಿರುವ ಯುಎಸ್ ಮಿಲಿಟರಿ ನೆಲೆಗಳು ಹಾಗೂ ಅಮೆರಿಕನ್ ವಾಣಿಜ್ಯ ಸಂಸ್ಥೆಗಳ ಮೇಲೆಯೂ ಪ್ರಹಾರ ವಿಸ್ತರಿಸಲಿದೆ ಎಂದು ಇರಾನ್ ಎಚ್ಚರಿಸಿದೆ.

ಕಳೆದ ತಿಂಗಳು ಒಪ್ಪಂದದ ಅವಧಿ ಮುಗಿದ ಬಳಿಕ, ಕತಾರ್ ಮತ್ತು ಪಾಕಿಸ್ತಾನ ಉಭಯ ದೇಶಗಳ ನಡುವೆ ಕದನವಿರಾಮ ತರಲು ಸತತ ಪ್ರಯತ್ನ ನಡೆಸುತ್ತಿವೆ. ಫೆಬ್ರವರಿ ಅಂತ್ಯದಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಬಳಿಕ ಉದ್ವಿಗ್ನಗೊಂಡಿರುವ ಈ ಸಂಘರ್ಷವನ್ನು ತಣ್ಣಗಾಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲೂ ಒತ್ತಡ ತೀವ್ರಗೊಂಡಿದೆ.

Edited By : Nirmala Aralikatti
PublicNext

PublicNext

20/09/2026 02:10 pm

Cinque Terre

8.74 K

Cinque Terre

0

ಸಂಬಂಧಿತ ಸುದ್ದಿ