ಬೆಂಗಳೂರು : ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯಲಿದೆ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶವಿಲ್ಲದೆ ನಡೆಯಲಿರುವ ಈ ವಿಶೇಷ ಅಧಿವೇಶನದಲ್ಲಿ ಪ್ರಮುಖವಾಗಿ ಎರಡು ವಿಚಾರಗಳು ಪ್ರತಿಧ್ವನಿಸಲಿವೆ.
ರಾಜ್ಯವನ್ನು ಕಾಡುತ್ತಿರುವ ಬರ ಪರಿಸ್ಥಿತಿ ಮತ್ತು ಬಹುಚರ್ಚಿತ ಕಸ್ತೂರಿ ರಂಗನ್ ವರದಿ ಕುರಿತು ಸದನದಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಮೊದಲ ದಿನವೇ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯಲಿದ್ದು, ಬಳಿಕ ಕಸ್ತೂರಿ ರಂಗನ್ ವರದಿಯ ವಿಚಾರ ಸದನದಲ್ಲಿ ಪ್ರಸ್ತಾಪವಾಗಲಿದೆ.
ಮೂರು ದಿನಗಳ ವಿಶೇಷ ಅಧಿವೇಶನಕ್ಕೆ ವಿಧಾನಮಂಡಲ ಸಜ್ಜಾಗಿದೆ. ಪ್ರಶ್ನೋತ್ತರ ಕಲಾಪ ಇಲ್ಲದೆ ನಡೆಯಲಿರುವ ಅಧಿವೇಶನದಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಮೊದಲ ಆದ್ಯತೆ ರಾಜ್ಯದ ಬರ ಪರಿಸ್ಥಿತಿಗೆ.
ರಾಜ್ಯದ ಹಲವು ತಾಲೂಕುಗಳು ಬರದಿಂದ ತತ್ತರಿಸಿದ್ದು, ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಶಾಸಕರಿಂದ ಒತ್ತಾಯ ಕೇಳಿಬರುವ ಸಾಧ್ಯತೆ ಇದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಬರ ಪರಿಸ್ಥಿತಿ, ರೈತರು ಎದುರಿಸುತ್ತಿರುವ ಸಂಕಷ್ಟ, ಬೆಳೆ ನಷ್ಟ ಹಾಗೂ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ವಿಚಾರಗಳನ್ನು ಶಾಸಕರು ಸದನದ ಗಮನಕ್ಕೆ ತರಲಿದ್ದಾರೆ.
ಬರದಿಂದ ರಾಜ್ಯಕ್ಕೆ ಆಗಿರುವ ನಷ್ಟದ ಅಂದಾಜು ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸದನದಲ್ಲಿ ಮಾಹಿತಿ ನೀಡಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಹಾಗೂ ನೆರವು ಪಡೆಯುವ ನಿಟ್ಟಿನಲ್ಲಿ ನಿಯೋಗ ಕೊಂಡೊಯ್ಯುವ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆ ಇದೆ.
ಬರ ವಿಚಾರದಲ್ಲಿ ಈಗಾಗಲೇ ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ರಾಜ್ಯದಲ್ಲಿ ಬರ ಘೋಷಣೆ ಮಾಡಿ ರೈತರ ಸಾಲ ಮನ್ನಾ ಮಾಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಇದಕ್ಕೆ ಪ್ರತಿಯಾಗಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಗತ್ಯ ನೆರವು ಕೊಡಿಸುವ ನಿಟ್ಟಿನಲ್ಲಿ ವಿಪಕ್ಷಗಳು ಒತ್ತಡ ಹೇರಬೇಕು ಎಂದು ಸರ್ಕಾರ ತಿರುಗೇಟು ನೀಡಿದೆ. ಹೀಗಾಗಿ ವಿಶೇಷ ಅಧಿವೇಶನದಲ್ಲಿ ಬರದ ಮೇಲಿನ ಚರ್ಚೆ ಕಾವೇರುವ ಸಾಧ್ಯತೆ ಇದ್ದು, ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಕ್ಸಮರವೂ ನಡೆಯುವ ಸಾಧ್ಯತೆ ಇದೆ.
ಇನ್ನು ವಿಶೇಷ ಅಧಿವೇಶನದ ಮತ್ತೊಂದು ಪ್ರಮುಖ ವಿಚಾರ ಕಸ್ತೂರಿ ರಂಗನ್ ವರದಿ. ಈಗಾಗಲೇ ಕಸ್ತೂರಿ ರಂಗನ್ ವರದಿಗೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವರದಿಯಲ್ಲಿ ಮಾರ್ಪಾಡು ಮಾಡಬೇಕು ಅಥವಾ ವರದಿಯನ್ನು ತಿರಸ್ಕರಿಸಬೇಕು ಎಂಬ ನಿಲುವಿಗೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಈ ವಿಚಾರವೂ ಸದನದಲ್ಲಿ ಮಹತ್ವ ಪಡೆದುಕೊಳ್ಳಲಿದೆ.
ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆಯನ್ನು ಒಂದು ದಿನ ಮುಂದೂಡಲಾಗಿದ್ದು, ಮೊದಲು ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯಲಿದೆ. ಬಳಿಕ ವರದಿಯ ಸಾಧಕ-ಬಾಧಕಗಳು, ರಾಜ್ಯದ ಹಿತಾಸಕ್ತಿ ಹಾಗೂ ಪರಿಸರ ಸಂರಕ್ಷಣೆಯ ವಿಚಾರಗಳ ಕುರಿತು ಶಾಸಕರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.
ಒಟ್ಟಿನಲ್ಲಿ, ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಬರದ ಬಿಸಿ… ಕಸ್ತೂರಿ ರಂಗನ್ ವರದಿಯ ಕಾವು… ಎರಡೂ ವಿಚಾರಗಳು ಸರ್ಕಾರ ಮತ್ತು ವಿಪಕ್ಷಗಳ ನಡುವಿನ ರಾಜಕೀಯ ಚರ್ಚೆಗೆ ವೇದಿಕೆಯಾಗುವ ಸಾಧ್ಯತೆ ಇದೆ.
PublicNext
20/09/2026 01:50 pm