ಬೆಂಗಳೂರು : ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯ ವಿಚಾರಣೆ ಮತ್ತೆ ಆರಂಭಗೊಂಡಿದ್ದು, ವಾದ-ಪ್ರತಿವಾದಗಳು ತೀವ್ರಗೊಂಡಿವೆ. ಪ್ರಕರಣದ 14ನೇ ಆರೋಪಿ (A14) ಪ್ರದೂಷ್ ಸಲ್ಲಿಸಿರುವ ‘ಮಾಫಿ ಸಾಕ್ಷಿ’ ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕರು ಷರತ್ತುಬದ್ಧ ಒಪ್ಪಿಗೆ ಸೂಚಿಸಿದ್ದಾರೆ.
ಕೋರ್ಟ್‌ನಲ್ಲಿ ನಡೆದ ಪ್ರಮುಖ ವಾದ-ಪ್ರತಿವಾದಗಳು
ನಟ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಹಸ್ಮತ್ ಪಾಷಾ, “ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇಲ್ಲ, ಸಾಕಷ್ಟು ಸಾಕ್ಷಿಗಳಿವೆ ಎಂದು ಸ್ವತಃ ಪ್ರಾಸಿಕ್ಯೂಷನ್ ಹೇಳಿದೆ. ಹೀಗಿರುವಾಗ ಮತ್ತೊಬ್ಬ ಆರೋಪಿಯನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಲು ಹೊರಟಿರುವುದು ಏಕೆ?” ಎಂದು ಪ್ರಶ್ನಿಸಿದರು. ಅಲ್ಲದೆ, ಪ್ರದೂಷ್ ಸಲ್ಲಿಸಿರುವ ಅರ್ಜಿ ಪ್ರತಿಯನ್ನು ತಮಗೂ ನೀಡುವಂತೆ ಕೋರಿದರು. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, “ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ಮಾತ್ರವೇ ಸಹ-ಆರೋಪಿಗಳು ಪ್ರಶ್ನಿಸಬಹುದೇ ವಿನಃ, ಇನ್ನೊಬ್ಬ ಆರೋಪಿ ಮಾಫಿ ಸಾಕ್ಷಿಯಾಗುವುದನ್ನು ತಡೆಯುವ ಅಧಿಕಾರ ಇತರ ಆರೋಪಿಗಳಿಗಿಲ್ಲ” ಎಂದರು. ಈ ವೇಳೆ ‘ಕೋಳಿ ಕೇಳಿ ಖಾರ ಅರಿಯಬೇಕೇ?’ ಎಂಬ ಜನಪ್ರಿಯ ಗಾದೆಯನ್ನು ಉಲ್ಲೇಖಿಸಿದ ಎಸ್ಪಿಪಿ, ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆಗೆ ಇತರೆ ಆರೋಪಿಗಳ ಸಹಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಫಿ ಸಾಕ್ಷಿ ಅಂಗೀಕರಿಸುವಾಗ ಆರೋಪಿಯ ಪಾತ್ರ ಪ್ರಮುಖವಾಗಿರುತ್ತದೆ ಎಂದ ಎಸ್ಪಿಪಿ, “ದರ್ಶನ್ ಹಲ್ಲೆ ನಡೆಸುತ್ತಿದ್ದಾಗ, ‘ಬೇಡ ಸಾರ್, ಬೇಡ ಸಾರ್’ ಎಂದು ಪ್ರದೂಷ್ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದನು” ಎಂದು ಘಟನೆಯಲ್ಲಿದ್ದ ಆತನ ಪಾತ್ರವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಎಸ್ಪಿಪಿ ಪ್ರಸನ್ನ ಕುಮಾರ್ ಅವರು ನ್ಯಾಯಾಲಯಕ್ಕೆ ಷರತ್ತುಬದ್ಧ ಒಪ್ಪಿಗೆ ಮೆಮೋ ಸಲ್ಲಿಕೆ ಮಾಡಿದ್ದು, ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ
1. ಆರೋಪಿ ಪ್ರದೂಷ್ ತನಗೆ ತಿಳಿದಿರುವ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ತೆರೆದಿಡಬೇಕು.
2. ಕೇವಲ ತನ್ನ ಮೇಲಿನ ಆರೋಪ ಮಾತ್ರವಲ್ಲದೆ, ಪ್ರಕರಣದ ಇತರ ಎಲ್ಲ ಆರೋಪಿಗಳ ವಿರುದ್ಧ ತನಗೆ ತಿಳಿದಿರುವ ವಿಷಯಗಳನ್ನು ಮತ್ತು ಕೃತ್ಯದ ಸತ್ಯಾಸತ್ಯತೆಯನ್ನು ಸ್ಪಷ್ಟವಾಗಿ ಹೇಳಬೇಕು.
ದರ್ಶನ್ ಪರ ವಕೀಲರ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಪ್ರದೂಷ್ ಸಲ್ಲಿಸಿರುವ ಅರ್ಜಿ ಪ್ರತಿಯನ್ನು ಅವರಿಗೆ ಒದಗಿಸುವುದಾಗಿ ತಿಳಿಸಿದ್ದಾರೆ.
PublicNext
06/08/2026 04:51 pm