ಪಣಜಿ: 2013ರ ತೀವ್ರ ಸಂಚಲನ ಮೂಡಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ವಜಾಗೊಳಿಸಿದ ಹೈಕೋರ್ಟ್, ಗೋವಾ ಸರ್ಕಾರದ ಮೇಲ್ಮನವಿಯನ್ನು ಎತ್ತಿಹಿಡಿದಿದೆ. ಐಪಿಸಿ ಸೆಕ್ಷನ್ 376 ಸೇರಿದಂತೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪಗಳಡಿ 62 ವರ್ಷದ ತೇಜ್‌ಪಾಲ್ ದೋಷಿ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
2013 ರಲ್ಲಿ ಗೋವಾದಲ್ಲಿ ನಡೆದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ಹೋಟೆಲ್ ಒಂದರ ಲಿಫ್ಟ್‌ನಲ್ಲಿ ತಮ್ಮ ಮೇಲೆ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಿರಿಯ ಸಹೋದ್ಯೋಗಿ ಆರೋಪಿಸಿದ್ದರು. 2021ರಲ್ಲಿ ಮಾಪುಸಾ ಸೆಷನ್ಸ್ ಕೋರ್ಟ್ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ತೀರ್ಪು ಪ್ರಕಟವಾದ ವೇಳೆ ಕೋರ್ಟ್‌ನಲ್ಲಿದ್ದ ತೇಜ್‌ಪಾಲ್, ತಮಗೆ 62 ವರ್ಷ ವಯಸ್ಸಾಗಿದ್ದು, ವಯಸ್ಸಿನ ಆಧಾರದ ಮೇಲೆ ಕನಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಕಠಿಣ ವಿರೋಧ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ತಂದೆಯ ಸ್ಥಾನದಲ್ಲಿದ್ದ ವ್ಯಕ್ತಿ ಮಗಳ ವಯಸ್ಸಿನ ಯುವತಿ ಮೇಲೆ ದೌರ್ಜನ್ಯ ಎಸಗಿದ್ದಾರೆ, ಸಮಾಜಕ್ಕೆ ಸಂದೇಶ ರವಾನೆಯಾಗಲು ಕಠಿಣ ಶಿಕ್ಷೆಯ ಅಗತ್ಯವಿದೆ" ಎಂದು ವಾದಿಸಿದರು.
PublicNext
06/08/2026 12:41 pm