ಗದಗ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ, ದೊಡ್ಡೂರು, ಬಾಲೆಹೊಸೂರ, ಹುಲ್ಲೂರು, ಆಡರಕಟ್ಟಿ ಹಾಗೂ ಆದರಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ವಿಬಿ-ಜಿ ರಾಮ್ ಜಿ (VB-G RAM G) ಯೋಜನೆಯಡಿ ಸಮುದಾಯ ಕಾಮಗಾರಿಗಳು ಆರಂಭಗೊಂಡಿದ್ದು, ಕಾಮಗಾರಿ ಸ್ಥಳಗಳಿಗೆ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಧರ್ಮರ ಕೃಷ್ಣಪ್ಪ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಜನರು ಯೋಜನೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗದ ಜೊತೆಗೆ ಗ್ರಾಮಾಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಯೋಜನೆಯ ಅನುಷ್ಠಾನದ ಕುರಿತು ಮಾಹಿತಿ ನೀಡಿದ ಅವರು, ದಿನಗೂಲಿ ಮೊತ್ತವನ್ನು ₹370ರಿಂದ ₹382ಕ್ಕೆ ಹೆಚ್ಚಳ ಮಾಡಲಾಗಿದೆ. ಕಾರ್ಮಿಕರಿಗೆ ಅಳತೆಗೆ ಅನುಗುಣವಾಗಿ ಕೆಲಸ ನೀಡಲಾಗುತ್ತಿದ್ದು, ಪೂರ್ಣ ಕೂಲಿ ಪಡೆಯಲು ಅವಕಾಶವಿದೆ. ವಾರ್ಷಿಕ ಮಾನವ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಒಂದು ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ ಹೊಂದಿರುವ ಕುಟುಂಬಕ್ಕೆ ವಾರ್ಷಿಕವಾಗಿ ₹47,750 ವರೆಗೆ ಆದಾಯ ಗಳಿಸುವ ಅವಕಾಶ ಕಲ್ಪಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ 60 ದಿನಗಳವರೆಗೆ ಯೋಜನೆಯ ಕೂಲಿ ಕೆಲಸಕ್ಕೆ ವಿರಾಮ ನೀಡಲಾಗಿದ್ದು, ಕಾರ್ಮಿಕರು ಪ್ರತಿದಿನ ಎರಡು ಬಾರಿ ಎನ್‌ಎಂಎಂಎಸ್ (NMMS) ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ನೂತನ ಯೋಜನೆಯಡಿ 318 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ–6 ಸಲ್ಲಿಸುವ ಮೂಲಕ ಕೂಲಿ ಕೆಲಸ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ರವಿ ಕೊರಕನವರ, ರಿಯಾಜ್ ಖದೀಬ, ಮಾದರ, ಗೋವಿಂದ ರೆಡ್ಡಿ, ಕೆ.ಸಿ. ಕಡೂರು, ಕಾರ್ಯದರ್ಶಿ ಕವಿತಾ ಅಣ್ಣಿಗೇರಿ, ವಡಕನಗೌಡ್ರು, ತಾಂತ್ರಿಕ ಸಂಯೋಜಕ ಹರೀಶ ಸೊಬರದ, ಟಿಐಇಸಿ ಮಂಜುನಾಥಸ್ವಾಮಿ ಎಚ್.ಎಂ., ತಾಂತ್ರಿಕ ಸಹಾಯಕರು ಶ್ರೀನಿವಾಸ, ಫಕ್ಕಿರೇಶ ನಿಟ್ಟಾಲಿ, ಶ್ರೀಧರ ಕುಲಕರ್ಣಿ, ಪ್ರವೀಣ್ ಬಿ. ಕರಕನಗೌಡ್ರು, ಬಿಎಫ್‌ಟಿ ಕಾಸಿಂಸಾಬ್ ನದಾಫ್, ಸತೀಶ್ ಅರಿಶಿಣದ, ತಿರುಕಪ್ಪ ಬಾಲೆಹೊಸೂರ, ಶಿಲ್ಪ ಲಮಾಣಿ, ಜಿಕೆಎಂ ಮಂಜುಳಾ ಕಟ್ಟಿಮನಿ, ಟಿಆರ್‌ಎಂ ಗೌರಮ್ಮ ಲಮಾಣಿ, ಪರಮೇಶ ಲಮಾಣಿ ಹಾಗೂ ವಿನೋದ ಲಮಾಣಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
PublicNext
06/08/2026 06:52 pm