ನವದೆಹಲಿ: ಉನ್ನತ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಶೈಕ್ಷಣಿಕ ವಿನಿಮಯಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತವು, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳೊಂದಿಗೆ ಬ್ರಿಕ್ಸ್ (BRICS) ದ್ವಿಪಕ್ಷೀಯ ಸಭೆ ನಡೆಸಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗುರುವಾರ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಶಿಕ್ಷಣ ಸಚಿವರ ಜೊತೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು. ಈ ವೇಳೆ ಭಾರತದೊಂದಿಗೆ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಬ್ರಿಕ್ಸ್ ಶಿಕ್ಷಣ ಸಚಿವರ ಸಭೆಯ ವೇಳೆ ಇಂಡೋನೇಷ್ಯಾದ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬ್ರಿಯಾನ್ ಯುಲಿಯಾರ್ಟೊ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಸಚಿವ ಪ್ರಲ್ಹಾದ ಜೋಶಿ, ಎರಡೂ ದೇಶಗಳ ನಡುವೆ ಶೈಕ್ಷಣಿಕ ವಿನಿಮಯ ಹೆಚ್ಚಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಸಂಶೋಧನೆ, ನಾವೀನ್ಯತೆ ಹಾಗೂ ಕೌಶಲ್ಯಾಭಿವೃದ್ಧಿಯಲ್ಲಿ ಸಹಯೋಗ ಬಲಪಡಿಸಲು 'ಐಐಟಿ ಮದ್ರಾಸ್ ಗ್ಲೋಬಲ್ ರಿಸರ್ಚ್ ಫೌಂಡೇಶನ್' ಹಾಗೂ ಇಂಡೋನೇಷ್ಯಾದ ಉನ್ನತ ಶಿಕ್ಷಣ ಸಚಿವಾಲಯದ ನಡುವೆ ಒಪ್ಪಂದಕ್ಕೆ ಅಂಕಿತ ಬಿದ್ದಿತು. ಈ ಕುರಿತು ಮಾತನಾಡಿದ ಸಚಿವರು, "ಈ ಪಾಲುದಾರಿಕೆಯು ಯುವಜನತೆಗೆ ಕೌಶಲ್ಯ, ಕಲಿಕೆ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ದಕ್ಷಿಣ ಆಫ್ರಿಕಾದ ಶಿಕ್ಷಣ ಸಚಿವೆ ಸಿವಿವೆ ಜಿ (Siviwe G) ಹಾಗೂ ಉನ್ನತ ಶಿಕ್ಷಣ ಮತ್ತು ತರಬೇತಿ ಉಪ ಸಚಿವೆ ಡಾ. ಡಿ.ಎಂ. ದುಬೆ ಅವರೊಂದಿಗೂ ಸಚಿವ ಜೋಶಿ ಅವರು ಮಾತುಕತೆ ನಡೆಸಿದರು. ಸಭೆಯಲ್ಲಿ ಮೂಲಭೂತ ಶಿಕ್ಷಣ, ಕೌಶಲ್ಯ ತರಬೇತಿ ಮತ್ತು ಡಿಜಿಟಲ್ ಕಲಿಕೆಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವ ಕುರಿತು ಆಲೋಚನೆಗಳನ್ನು ಹಂಚಿಕೊಳ್ಳಲಾಯಿತು.
ಭಾರತದ ಯಶಸ್ವಿ ಶೈಕ್ಷಣಿಕ ಉಪಕ್ರಮಗಳಾದ ನಿಪುಣ್ ಭಾರತ್ (NIPUN Bharat), ಪರಖ್ (PARAKH), ಸ್ವಯಂ (SWAYAM) ಮತ್ತು ಸಮರ್ಥ್ (SAMARTH) ಯೋಜನೆಗಳನ್ನು ಹಂಚಿಕೊಳ್ಳುವ ಮೂಲಕ ಶೈಕ್ಷಣಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಯಿತು.
PublicNext
06/08/2026 10:23 pm