ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಗ್ಗಕ್ಕೆ ತಪ್ಪಿದ ಜ್ಞಾನಪೀಠ: ಡಿವಿಜಿ ಬದುಕಿದ್ದಾಗಲೇ ಅನುವಾದವಾಗಿದ್ದರೆ ಸಿಗುತ್ತಿತ್ತು ಅತ್ಯುನ್ನತ ಗೌರವ – ವಾಗ್ಮಿ ಜಿ.ಎಸ್. ನಟೇಶ್

ಚಿಕ್ಕಮಗಳೂರು: ಕುವೆಂಪು ಕಲಾಮಂದಿರದಲ್ಲಿ ಬೊಂಗಾಳೆ ಪ್ರಕಾಶನ ಹಾಗೂ ಕಲ್ಕಟ್ಟೆ ಪುಸ್ತಕದ ಮನೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಹಿತಿ ಬಿ.ಎನ್. ರಮೇಶ್ ಬೊಂಗಾಳೆ ಅವರು ಹಿಂದಿಗೆ ಅನುವಾದಿಸಿ ವ್ಯಾಖ್ಯಾನಿಸಿರುವ 'ಮಂಕುತಿಮ್ಮನ ಕಗ್ಗ' ಹಾಗೂ ಅವರ 'ಬದುಕುವ ಕಲೆ ಮತ್ತು ಅರಿವಿನ ಹಾದಿ' ಕೃತಿಗಳು ಅತ್ಯಂತ ವಿಜೃಂಭಣೆಯಿಂದ ಲೋಕಾರ್ಪಣೆಗೊಂಡವು.

ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ಎಂ.ಆರ್. ಗುರುಮೂರ್ತಿ ಉದ್ಘಾಟಿಸಿದರೆ, ಸುಜಾತ ಗುರುಮೂರ್ತಿ ಅವರು ಕಗ್ಗದ ಹಿಂದಿ ಧ್ವನಿಮುದ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮಂಕುತಿಮ್ಮನ ಕಗ್ಗ ಪ್ರವಚನ ಖ್ಯಾತಿಯ ವಾಗ್ಮಿ ಶಿವಮೊಗ್ಗದ ಜಿ.ಎಸ್. ನಟೇಶ್ ಅವರು, ಡಿ.ವಿ.ಜಿ. ಅವರ ಜೀವಿತಾವಧಿಯಲ್ಲೇ ಕಗ್ಗವು ಇಂಗ್ಲಿಷ್ ಅಥವಾ ಹಿಂದಿಗೆ ಅನುವಾದಗೊಂಡಿದ್ದರೆ ಖಂಡಿತವಾಗಿ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸರೋಜಿನಿ ಮಹಿಷಿ ಅವರಂತಹ ವಿದ್ವಾಂಸರೇ ಹಿಂದೆ ಕೇವಲ ಕೆಲ ಸಾಲುಗಳನ್ನು ಮಾತ್ರ ಅನುವಾದಿಸಲು ಸಾಧ್ಯವಾಗಿದ್ದ ಕಗ್ಗದ ಎಲ್ಲಾ 945 ಮುಕ್ತಕಗಳನ್ನು ರಮೇಶ್ ಬೊಂಗಾಳೆ ಅವರು ಮೂರು ವರ್ಷಗಳ ನಿರಂತರ ಶ್ರಮದಿಂದ ಯಶಸ್ವಿಯಾಗಿ ಸಂಪೂರ್ಣ ಅನುವಾದ ಮಾಡಿರುವುದು ಅಪಾರ ಸಾಧನೆ ಎಂದು ಬಣ್ಣಿಸಿದರು.

ಇದೇ ವೇಳೆ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಶಸ್ತ್ರ ಹಾಗೂ ಶಾಸ್ತ್ರ ಜ್ಞಾನದ ಕೊರತೆಯಿಂದಾಗಿ ಇಂದಿನ ಸಮಾಜದಲ್ಲಿ ಕಲೆ ಮತ್ತು ಸಾಹಿತ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ ಎಂದು ಎಚ್ಚರಿಸಿದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನಿ ಡಾ. ವಿಜಯಕುಮಾರ್ ಅವರೇಕಾಡು 'ಬದುಕುವ ಕಲೆ ಮತ್ತು ಅರಿವಿನ ಹಾದಿ' ಕೃತಿ ಬಿಡುಗಡೆ ಮಾಡಿ, ವಿಶ್ವ ಪುಸ್ತಕ ದಿನದಂದೇ ಇಂತಹ ಶ್ರೇಷ್ಠ ಕೃತಿಗಳು ಹೊರಬರುತ್ತಿರುವುದು ಸಂತಸದ ವಿಷಯ ಎಂದರು. ಮುಖ್ಯ ಭಾಷಣಕಾರರಾಗಿದ್ದ ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಅವರು ರಮೇಶ್ ಬೊಂಗಾಳೆ ಅವರ ಅನುವಾದಿತ ಪ್ರತಿಭೆಯನ್ನು ಶ್ಲಾಘಿಸುತ್ತಾ, ಅವರು ಕನ್ನಡ ಮತ್ತು ಹಿಂದಿ ಭಾಷೆಗಳ ನಡುವೆ ಗಟ್ಟಿ ಸೇತುವೆಯಾಗಿ ಕೆಲಸ ಮಾಡಿದ್ದಾರೆ ಹಾಗೂ ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಅನುವಾದಿಸಿ ಸುದೀರ್ಘ ಕಾಲ ಉಳಿಯುವಂತಹ ಕೊಡುಗೆ ನೀಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಬಿ.ಎನ್. ರಮೇಶ್ ಬೊಂಗಾಳೆ, ಕಗ್ಗವನ್ನು ಹಿಂದಿಗೆ ತರುವಲ್ಲಿ ಆದ ಅನುಭವಗಳನ್ನು ಹಂಚಿಕೊಂಡು, ಗುರುಮೂರ್ತಿ ದಂಪತಿಯ ಸಂಪೂರ್ಣ ಆರ್ಥಿಕ ನೆರವಿನಿಂದ ಈ ಕೃತಿ ಪುಸ್ತಕ ರೂಪದಲ್ಲಿ ಬರಲು ಸಾಧ್ಯವಾಯಿತು ಎಂದು ಸ್ಮರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿಗಳಾದ ನಾಗರಾಜರಾವ್ ಕಲ್ಕಟ್ಟೆ, ರಾಯಾನಾಯಕ್, ಎಸ್.ಪಿ. ಅಶೋಕ್ ಉಪಸ್ಥಿತರಿದ್ದರೆ, ಸುಮಾಪ್ರಸಾದ್ ಹಾಗೂ ರೇಖಾ ನಾಗರಾಜ ರಾವ್ ಕೃತಿಗಳ ಕುರಿತು ಅನಿಸಿಕೆ ಹಂಚಿಕೊಂಡರು. ಶ್ರೀಕಂಠೇಶ್ವರ ನೃತ್ಯ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ ಪ್ರದರ್ಶನವು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.

Edited By : PublicNext Desk
Kshetra Samachara

Kshetra Samachara

09/08/2026 08:15 pm

Cinque Terre

740

Cinque Terre

0