ಬೀದರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿಟ್ಟೆ ಮಾಧವ ವಿಠಲರಾವ್ ಅವರು ಬಸವಕಲ್ಯಾಣ ತಾಲೂಕಿನ ಮಂಟಾಳ ಗ್ರಾಮ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ವಿಬಿ-ಜಿ-ರಾಮ್-ಜಿ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಇಒ, ಕೂಲಿ ಕಾರ್ಮಿಕರೊಂದಿಗೆ ಮುಕ್ತ ಸಂವಾದ ನಡೆಸಿದರು. ಅಲ್ಲದೆ, ಕಾಮಗಾರಿಯಲ್ಲಿ ಕಾರ್ಮಿಕರೊಂದಿಗೆ ತಾವೂ ಭಾಗವಹಿಸಿ, ಕೆಲಸ ಮಾಡಿದವರಿಗೆ ಕೂಲಿ ಸಿಗಲಿದ್ದು ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದರು.
ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ಅಗತ್ಯ. ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಬದುಕಿನಲ್ಲಿ ಬದಲಾವಣೆ ಸಾಧ್ಯ. ತಮ್ಮ ಮಕ್ಕಳೂ ಕೂಲಿ ಕೆಲಸ ಮಾಡಬಾರದು ಎಂದರೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕಾರ್ಮಿಕರಿಗೆ ಸಲಹೆ ನೀಡಿದರು.
ತಾವು ಕೂಡ ಬಡ ಕುಟುಂಬದಲ್ಲಿ ಹುಟ್ಟಿ, ಪೋಷಕರ ಪರಿಶ್ರಮದಿಂದ ಈ ಹಂತಕ್ಕೆ ಬಂದಿರುವುದಾಗಿ ತಮ್ಮ ಅನುಭವ ಹಂಚಿಕೊಂಡರು. ಬಳಿಕ ವಿಬಿ-ಜಿ-ರಾಮ್-ಜಿ ಯೋಜನೆಯ ನೂತನ ಜಾಬ್ ಕಾರ್ಡ್‌ಗಳನ್ನು ವಿತರಿಸಿದರು.
ಮಂಟಾಳ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಜೆಜೆಎಂ ಕಾಮಗಾರಿ, ಅರಿವು ಕೇಂದ್ರ, ಅಂಗನವಾಡಿ, ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಔಷಧಗಳ ಲಭ್ಯತೆ ಪರಿಶೀಲಿಸಿ, ರೋಗಿಗಳಿಂದ ಮಾಹಿತಿ ಪಡೆದರು. ಜೆಜೆಎಂ ಯೋಜನೆಯಡಿ ಮನೆಗಳಿಗೆ ಕಲ್ಪಿಸಿರುವ ನಳ ಸಂಪರ್ಕವನ್ನು ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಸರ್ಕಾರಿ ಶಾಲೆಯಲ್ಲಿ ಅಪೂರ್ಣವಾಗಿರುವ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹಾಗೂ ಆಟದ ಮೈದಾನ ಅಭಿವೃದ್ಧಿಪಡಿಸುವಂತೆ ಸೂಚಿಸಿದರು. ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನದ ಊಟ ಸೇವಿಸಿದರು.
ಬಳಿಕ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ರಕ್ತ ಪರೀಕ್ಷೆ, ಐಸಿಟಿಸಿ, ಸ್ಕ್ಯಾನಿಂಗ್ ಹಾಗೂ ತಾಯಿ-ಮಗು ವಿಭಾಗಗಳನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Kshetra Samachara
11/09/2026 08:02 pm