ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಿಂದಲೇ ಲಿಂಗೇಶ್ವರ ದೇವಸ್ಥಾನದಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆದಿದೆ.
ಅಮಾವಾಸ್ಯೆ ಜಾತ್ರೆಗಾಗಿ ಶಹಾಪುರ ತಾಲೂಕಿನ ಚಾಮನಾಳ ಮತ್ತು ಪಗಲಾಪುರ ಗ್ರಾಮಗಳಿಂದ ಬಂದಿದ್ದ ದಲಿತ ಕುಟುಂಬಗಳು ಜಾತ್ರೆ ಮುಗಿಸಿ ಮರುದಿನ ಊರಿಗೆ ವಾಪಸಾಗಲು ಸಿದ್ಧತೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ದೇವಸ್ಥಾನದ ಆವರಣದಿಂದ ಹೊರಡಲು ಆಟೋ ರಿವರ್ಸ್ ಮಾಡುವಾಗ ಸ್ಥಳೀಯ ಬಾಲಕನಿಗೆ ಆಟೋ ತಗುಲಿದ ವಿಚಾರಕ್ಕೆ ಮಾತಿನ ಚಕಮಕಿ ಶುರುವಾಗಿದೆ. ಬಳಿಕ ಅದು ಎರಡು ಗುಂಪುಗಳ ಗಲಾಟೆಗೆ ತಿರುಗಿದ್ದು, ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆದಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಘಟನೆಯಲ್ಲಿ ಎರಡೂ ಕಡೆಯವರಿಗೂ ಗಾಯಗಳಾಗಿದ್ದು, ಐದು ಮಂದಿ ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಯುವತಿಯೊಬ್ಬರು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಕುರಿತು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಪ್ರತಿಕ್ರಿಯಿಸಿ, ಆಟೋ ರಿವರ್ಸ್ ವಿಚಾರವಾಗಿ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ. ಎರಡೂ ಕಡೆಯವರಿಗೂ ಗಾಯಗಳಾಗಿವೆ. ಸಂತ್ರಸ್ತರ ದೂರಿನ ಮೇರೆಗೆ ಅಟ್ರಾಸಿಟಿ ಮತ್ತು ಹಲ್ಲೆ ಪ್ರಕರಣ ದಾಖಲಿಸಿ 13 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, 2 ಮಂದಿಯನ್ನು ಬಂಧಿಸಲಾಗಿದೆ, ಉಳಿದವರಿಗಾಗಿ ಶೋಧ ನಡೆದಿದೆ ಎಂದು ತಿಳಿಸಿದ್ದಾರೆ.
PublicNext
15/09/2026 12:44 pm