ಚಿಕ್ಕಮಗಳೂರು: ಮಲೆನಾಡಿಗೆ ಕಂಟಕವಾದ ಕಸ್ತೂರಿರಂಗನ್ ವರದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ರೈತರ ಹೊಟ್ಟೆಗೆ ಹೊಡೆಯುವ ಹುನ್ನಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಬೆಳೆಗಾರರು, ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರ ಬದುಕಿಗೆ ಕೊಳ್ಳಿ ಇಡುತ್ತಿರುವ ಈ ವರದಿಯ ವಿರುದ್ಧ ಧ್ವನಿ ಎತ್ತಲು ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಖಾಡಕ್ಕಿಳಿಯುತ್ತಿದ್ದಾರೆ. ಸೆಪ್ಟೆಂಬರ್ 19ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಕಾಫಿನಾಡು ಚಿಕ್ಕಮಗಳೂರಿಗೆ ಸಿಎಂ ಆಗಮಿಸಲಿದ್ದು, ಸಂಕಷ್ಟದಲ್ಲಿರುವ ಮಲೆನಾಡಿಗರ ಅಹವಾಲುಗಳನ್ನು ನೇರವಾಗಿ ಆಲಿಸಲಿದ್ದಾರೆ. ಈ ಮಹತ್ವದ ಭೇಟಿಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸಾಥ್ ನೀಡಲಿದ್ದಾರೆ.
ಕಸ್ತೂರಿರಂಗನ್ ಶಿಫಾರಸುಗಳು ಜಾರಿಯಾದರೆ ಕಾಫಿ, ಅಡಿಕೆ, ಏಲಕ್ಕಿ, ತರಕಾರಿ ಬೆಳೆಗಾರರು ಮಾತ್ರವಲ್ಲದೆ ಲಕ್ಷಾಂತರ ಶ್ರಮಿಕ ವರ್ಗ ಬೀದಿಗೆ ಬೀಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಭೇದ ಮರೆತು ಜನಸಾಮಾನ್ಯರು, ಬೆಳೆಗಾರರು ಹಾಗೂ ಕಾರ್ಮಿಕರನ್ನು ಒಂದೇ ವೇದಿಕೆಗೆ ತಂದು ಬೃಹತ್ ಜನಾಭಿಪ್ರಾಯ ಸಂಗ್ರಹ ಸಭೆ ನಡೆಸಲಾಗುವುದು. ಜನರ ಈ ಆಕ್ರೋಶ ಮತ್ತು ಅಭಿಪ್ರಾಯಗಳನ್ನು ಸೆಪ್ಟೆಂಬರ್ 21ರಿಂದ 23ರವರೆಗೆ ಕರೆಯಲಾಗಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಗಟ್ಟಿಯಾಗಿ ಮಂಡಿಸಿ, ರಾಜ್ಯ ಸರ್ಕಾರದ ವತಿಯಿಂದ ವರದಿಯ ವಿರುದ್ಧ ಐತಿಹಾಸಿಕ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
PublicNext
18/09/2026 08:26 pm
LOADING...