ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆಸ್ಪತ್ರೆ ಜಾಗದಲ್ಲಿ ‘ಪವಿತ್ರ ವನ’ದ ಹೆಸರಲ್ಲಿ ಲಕ್ಷ ಲಕ್ಷ ಲೂಟಿ!: ವಿಷಜಂತುಗಳ ತಾಣವಾದ ಪಾರ್ಕ್

ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಪಾರ್ಕ್ ನಿರ್ಮಿಸುವ ನೆಪವೊಡ್ಡಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಆಲ್ದೂರು ಸಮೀಪದ ಗುಡದೂರಿನಲ್ಲಿ ಈ ಅಕ್ರಮ ನಡೆದಿದ್ದು, ಕಳೆದ ವರ್ಷ ಎಂನರೇಗಾ ಯೋಜನೆಯಡಿ ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪವಿತ್ರ ವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ನಿಯಮಾನುಸಾರ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ನೀಡಿ ಕಾಮಗಾರಿ ನಡೆಸಬೇಕಿದ್ದ ಸ್ಥಳದಲ್ಲಿ, ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿ ಕೇವಲ ಯಂತ್ರೋಪಕರಣಗಳ ಮೂಲಕ ಅರೆಬರೆ ಕೆಲಸ ಮಾಡಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟುಮಾಡಿದ್ದಾರೆ ಎಂದು ದೂರಲಾಗಿದೆ.

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿದೆ ಎನ್ನಲಾದ ಈ ಪಾರ್ಕ್ ಪ್ರಸ್ತುತ ಸಮರ್ಪಕ ನಿರ್ವಹಣೆಯಿಲ್ಲದೆ ಕಾಡು ಬೆಳೆದು ಹಾಳುಕೊಂಪೆಯಾಗಿದೆ. ಸ್ಥಳದಲ್ಲಿ ವಿಷಜಂತುಗಳು ಹಾಗೂ ಹಾವುಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಆ ಭಾಗಕ್ಕೆ ತೆರಳಲು ಭಯಪಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಗೆ ಕಾದಿರಿಸಿದ್ದ ಜಾಗವನ್ನು ಅನಗತ್ಯ ಕಾಮಗಾರಿಗೆ ಬಳಸಿ ದುರುಪಯೋಗಪಡಿಸಿಕೊಂಡಿರುವ ಈ ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಸಿ, ಭ್ರಷ್ಟಾಚಾರದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರಾದ ಶಿವಕುಮಾರ್ ಆಗ್ರಹಿಸಿದ್ದಾರೆ.

Edited By :
PublicNext

PublicNext

14/10/2026 01:49 pm

Cinque Terre

5.67 K

Cinque Terre

0

ಸಂಬಂಧಿತ ಸುದ್ದಿ