ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಉಗ್ರ ಸಂಘಟನೆ ಜೊತೆ ಸಂಪರ್ಕದ ಶಂಕೆ ; ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಬಂಧನ.!

ಕಲಬುರಗಿ: ನಗರದ ಸರಾಫ್ ಬಜಾರ್‌ನ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್-ಉಲ್-ಮಲೀಕ್ ಎಂಬಾತನನ್ನು ಉಗ್ರ ಸಂಘಟನೆ ಜೊತೆ ಸಂಪರ್ಕದ ಶಂಕೆಯ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ತನಿಖೆ ನಡೆಯುತ್ತಿದೆ. ಅಂತರಾಷ್ಟ್ರೀಯ ಜಾಲದ ಸಂಪರ್ಕ ಇರುವ ಪ್ರಕರಣಗಳಲ್ಲಿ ಮಾಹಿತಿ ಒಂದೇ ಇಲಾಖೆಗೆ ಸೀಮಿತವಿರುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ತನಿಖೆ ಮುಂದುವರಿಸಲಾಗುತ್ತಿದೆ ಎಂದರು.

ಕಾರ್ಖಾನೆ, ಉದ್ಯಮಗಳಲ್ಲಿ ಹೊರರಾಜ್ಯದ ಕಾರ್ಮಿಕರನ್ನು ನೇಮಕ ಮಾಡುವಾಗ ಹಿನ್ನೆಲೆ ಪರಿಶೀಲನೆ ಅಗತ್ಯ. ಉದ್ಯೋಗ ನೀಡುವವರು ಸ್ಥಳೀಯ ಪೊಲೀಸ್ ಠಾಣೆಗಳ ಮೂಲಕ ಮಾಹಿತಿ ಪಡೆದು ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.

ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಿರ್ದಿಷ್ಟ ವೆಬ್‌ಸೈಟ್, ಖಾತೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಹೇಳಿದರು.

ಭದ್ರತಾ ವಿಚಾರಗಳಲ್ಲಿ ಕೇಂದ್ರ-ರಾಜ್ಯ ಸಮನ್ವಯ ಅಗತ್ಯ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ರಾಜಕೀಯ ಮಾಡುವುದರಿಂದ ದೇಶದ ಭದ್ರತೆಗೆ ಧಕ್ಕೆ ಆಗಬಹುದು ಎಂದು ಅಭಿಪ್ರಾಯಪಟ್ಟರು.

ಅಕ್ರಮ ವಲಸಿಗರ ಪತ್ತೆಗೂ ಕ್ರಮ:

ಬಾಂಗ್ಲಾದೇಶ ಮೂಲದವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾತನಾಡಿ, ಅಂತರಾಷ್ಟ್ರೀಯ ಗಡಿ ದಾಟಿ ಬಂದವರ ಮೂಲ, ಅವರು ಯಾವ ಮಾರ್ಗದಲ್ಲಿ ಬಂದಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಮುಖ್ಯ ಎಂದರು.

ಕಳೆದ ಎರಡು ತಿಂಗಳಲ್ಲಿ ಗಡಿ ಭಾಗಗಳಿಂದ 1000ಕ್ಕೂ ಹೆಚ್ಚು ಜನರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆದಿದೆ. ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟವರು ಯಾರು ಎಂಬುದನ್ನೂ ಪತ್ತೆಹಚ್ಚಬೇಕು.

ತನಿಖೆಯಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಸಂಪರ್ಕಗಳು ಕಂಡುಬರುತ್ತಿವೆ. ಕರ್ನಾಟಕ ಪೊಲೀಸರು ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

Edited By :
PublicNext

PublicNext

18/10/2026 02:00 pm

Cinque Terre

6.19 K

Cinque Terre

0

ಸಂಬಂಧಿತ ಸುದ್ದಿ