ಚಿಕ್ಕಮಗಳೂರು: ಶರನ್ನವರಾತ್ರಿ ಉತ್ಸವದ ಕಳೆಗಟ್ಟಿದ್ದು, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ರಂಗಣ್ಣರವರ ಛತ್ರದಲ್ಲಿ ಆಯೋಜಿಸಲಾಗಿರುವ ‘ಬೊಂಬೆ ಉತ್ಸವ’ ಗಮನ ಸೆಳೆಯುತ್ತಿದೆ. ದಸರಾ ವೈಭವ, ಪೌರಾಣಿಕ ಇತಿಹಾಸ ಹಾಗೂ ಗ್ರಾಮೀಣ ಸೊಗಡನ್ನು ಮರುಸೃಷ್ಟಿಸಿರುವ ಈ ಅಪರೂಪದ ಪ್ರದರ್ಶನವು ಸಾರ್ವಜನಿಕರನ್ನು ಸೆಳೆಯುತ್ತಿದೆ.
ರಾಮಾಯಣ, ಮಹಾಭಾರತದ ಪ್ರಸಂಗಗಳು, ಅಷ್ಟಲಕ್ಷ್ಮಿಯರ ವೈಭವ ಹಾಗೂ ರಾವಣನ ದರ್ಬಾರ್ ನಂತಹ ಪೌರಾಣಿಕ ಕಥಾನಕಗಳು ಜೀವಂತವಾಗಿ ಮೂಡಿಬಂದಿವೆ. ಜೊತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿ, ಹಳೆಯ ಕಾಲದ ಉಪಕರಣಗಳು ಮತ್ತು ಕಣ್ಮರೆಯಾಗುತ್ತಿರುವ ಹಳ್ಳಿ ಸೊಗಡಿನ ಜೀವನಶೈಲಿಯನ್ನು ಬಿಂಬಿಸುವ ಬೊಂಬೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಕಲ್ಲಿನ ಹಾಗೂ ಮಣ್ಣಿನ ಪಾತ್ರೆಗಳು, ಕಂಚು-ಹಿತ್ತಾಳೆಯ ಪರಿಕರಗಳು, ಸೂಕ್ಷ್ಮ ಕೆತ್ತನೆಯ ಮರದ ವಸ್ತುಗಳು, ಪಿಂಗಾಣಿ ಕಲಾಕೃತಿಗಳು ಹಾಗೂ ಜಗತ್ಪ್ರಸಿದ್ಧ ಚನ್ನಪಟ್ಟಣದ ಬೊಂಬೆಗಳು ಸೇರಿದಂತೆ ದೇಶದ ನಾನಾ ಭಾಗಗಳ ಕಲಾತ್ಮಕ ವಸ್ತುಗಳು ಈ ಪ್ರದರ್ಶನದ ಕಳೆಯನ್ನು ಹೆಚ್ಚಿಸಿವೆ.
ಶತಮಾನಕ್ಕೂ ಹಿಂದಿನ ಅಪರೂಪದ ವಸ್ತುಗಳು, ಹಳೆಯ ಮಾದರಿಯ ರೇಡಿಯೋಗಳು ಹಾಗೂ ಜ್ವಾಲಾಮುಖಿಯ ಲಾವಾರಸದೊಂದಿಗೆ ದೊರೆಯುವ ಬಣ್ಣ ಬಣ್ಣದ ಅಪರೂಪದ ಕ್ರಿಸ್ಟಲ್ ಕಲ್ಲುಗಳು ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ. ಹೊಸ ತಲೆಮಾರಿಗೆ ನಮ್ಮ ಶ್ರೀಮಂತ ಪರಂಪರೆ ಮತ್ತು ಹಳೆಯ ಕಾಲದ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಸಾರ್ವಜನಿಕರು ಹಾಗೂ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಸಂಗ್ರಹವನ್ನು ಕಣ್ತುಂಬಿಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.
PublicNext
19/10/2026 01:04 pm
LOADING...