ಯಾದಗಿರಿ: ಬಸವಸಾಗರ ಜಲಾಶಯದ ನೀರನ್ನು ತೆಲಂಗಾಣಕ್ಕೆ ಹರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಯಾದಗಿರಿ ಜಿಲ್ಲೆಯ ಕೊನೆಯ ಭಾಗದ ರೈತರು ನೀರಿನ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದು, ಮಳೆ ಕೊರತೆಯ ನಡುವೆಯೇ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಹಾಗೂ ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಗುರ್ಜಾಪುರ ಬ್ಯಾರೇಜ್‌ನಿಂದ ತೆಲಂಗಾಣದ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಭಾರತೀಯ ಕೃಷಿಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ನೇತೃತ್ವದಲ್ಲಿ ರೈತ ಮುಖಂಡರು ಗುರ್ಜಾಪುರ ಬ್ಯಾರೇಜ್ ಹಾಗೂ ಸಂಗಮದ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಮಲ್ಲಣ್ಣಗೌಡ ಹಗರಟಗಿ, ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ. ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ತೆಲಂಗಾಣಕ್ಕೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸದಿದ್ದರೆ ನಾರಾಯಣಪುರದ ಬಸವಸಾಗರ ಡ್ಯಾಂಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಲಭ್ಯವಿರುವ ಜಲ ಸಂಪನ್ಮೂಲವನ್ನು ಸಮರ್ಪಕವಾಗಿ ನಿರ್ವಹಿಸಿ, ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯಗಳಿಗೆ ಆದ್ಯತೆ ನೀಡಬೇಕು. ರೈತರ ಹಿತಾಸಕ್ತಿಯನ್ನು ಕಡೆಗಣಿಸದೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
PublicNext
19/10/2026 07:43 pm
LOADING...