ಯಾದಗಿರಿ : ಮರಳು ಸಾಗಾಣಿಕೆಗೆ ರಾಯಲ್ಟಿ ವ್ಯವಸ್ಥೆ ಕಾನೂನುಬದ್ಧವಾಗಿ ಮರಳು ಸಾಗಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಟಿಪ್ಪರ್ ಮಾಲೀಕರ ಸಂಘದ ಚಂದ್ರಶೇಖರ ಗುತ್ತೇದಾರ ನೇತೃತ್ವದಲ್ಲಿ ನೂರಾರು ಲಾರಿ ಮತ್ತು ಟಿಪ್ಪರ್ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ನಡೆಸಿದರು.
ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ರಾಜ್ಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಹೋರಾಟಗಾರರು, ಯಾದಗಿರಿ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ಸ್ಥಗಿತಗೊಂಡಿರುವುದರಿಂದ ಲಾರಿ ಮತ್ತು ಟಿಪ್ಪರ್ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಯಲ್ಟಿ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗುವ ಅವಕಾಶವಿದ್ದರೂ ಮರಳು ಸಾಗಾಣಿಕೆಗೆ ಅನುಮತಿ ನೀಡದಿರುವುದು ಸರ್ಕಾರದ ಆದಾಯಕ್ಕೆ ನಷ್ಟ ಉಂಟುಮಾಡುತ್ತಿದೆ
ಯಾದಗಿರಿ ಜಿಲ್ಲೆಯಲ್ಲಿ ಮರಳು ಲಭ್ಯವಾಗದ ಕಾರಣ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಂದ ಮರಳು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಮರಳಿನ 1 ಲಕ್ಷ ಬೆಲೆ ಹೆಚ್ಚಾಗಿದ್ದು, ಮನೆ ನಿರ್ಮಾಣ ಮಾಡುತ್ತಿರುವ ಸಾಮಾನ್ಯ ಜನರು ಆರ್ಥಿಕ ಹೊರೆಯನ್ನು ಅನುಭವಿಸುವಂತಾಗಿದೆ. ಈಗಾಗಲೇ ಮನೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಮರಳಿನ ಬೆಲೆ ಮತ್ತಷ್ಟು ಹೊರೆಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಜಿಲ್ಲೆಯಲ್ಲಿ ರಾಯಲ್ಟಿ ವ್ಯವಸ್ಥೆಯನ್ನು ತಕ್ಷಣ ಜಾರಿಗೊಳಿಸಿ, ನಿಯಮಾನುಸಾರ ಮರಳು ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಬೇಕು. ಇದರಿಂದ ಟಿಪ್ಪರ್ ಮಾಲೀಕರು ಹಾಗೂ ಚಾಲಕರ ಜೀವನೋಪಾಯಕ್ಕೆ ನೆರವಾಗುವುದರ ಜೊತೆಗೆ ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ಮರಳು ಲಭ್ಯವಾಗಲು ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದ ಹೋರಾಟಗಾರರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮರಳು ಸಾಗಾಣಿಕೆಗೆ ಶೀಘ್ರ ಅನುಮತಿ ನೀಡದಿದ್ದರೆ ಲಾರಿ ಮತ್ತು ಟಿಪ್ಪರ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.
Kshetra Samachara
03/11/2026 07:14 pm