ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಕ್ರಾಸ್‌ನಲ್ಲಿ ಕಾಲುವೆಗಳಿಗೆ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು, ನವೆಂಬರ್ 30ರವರೆಗೆ ನೀರು ಹರಿಸಬೇಕು ಹಾಗೂ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಏಳು ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ನಾರಾಯಣಪುರ ಬಸವಸಾಗರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ವಾರಬಂದಿ ಪದ್ಧತಿ ರದ್ದುಪಡಿಸುವಂತೆ ರೈತರು ಆಗ್ರಹಿಸಿದ್ರು.. 10 ದಿನ ನೀರು ಹರಿಸಿ, ಎಂಟು ದಿನ ಬಂದ್ ಮಾಡುವ ಪದ್ಧತಿಯಿಂದ ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಮಳೆ ಕೊರತೆಯಿಂದ ಭತ್ತ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಪ್ರತಿ ಎಕರೆಗೆ 75 ರಿಂದ 80 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ.
ದೇವಾಪುರ ಕ್ರಾಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ರಾಜೂಗೌಡ, ರೈತರ ಜೀವನ ಸಮೃದ್ಧವಾಗಿದ್ದರೆ ಮಾತ್ರ ನಾಡು ಸಮೃದ್ಧವಾಗಿರುತ್ತದೆ. ಬೆಳಗಾವಿ ಭಾಗದ ರೈತರು ತಮ್ಮ ಸಮಸ್ಯೆಗಳಿಗಾಗಿ ರಾಜಕೀಯವನ್ನು ಬದಿಗಿಟ್ಟು ಒಗ್ಗಟ್ಟಾಗಿ ಹೋರಾಡುತ್ತಾರೆ. ಅದೇ ರೀತಿ ನಮ್ಮ ಭಾಗದ ರೈತರೂ ಒಗ್ಗಟ್ಟಾಗಿ ಹೋರಾಡಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ, ತೆಲಂಗಾಣದತ್ತ ನೀರು ಹರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಹೊರರಾಜ್ಯಕ್ಕೆ ಹರಿಸುವ ನೀರನ್ನು ನಿಲ್ಲಿಸಿ ಸ್ಥಳೀಯ ರೈತರ ಬೆಳೆಗಳಿಗೆ ಬಳಸಬೇಕು ಎಂದು ಒತ್ತಾಯಿಸಿದರು. ನವೆಂಬರ್ 30ರವರೆಗೆ ಕಾಲುವೆಗಳಿಗೆ ನಿರಂತರ ನೀರು ಹರಿಸಬೇಕು ಹಾಗೂ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಏಳು ಗಂಟೆ ವಿದ್ಯುತ್ ಪೂರೈಸಬೇಕು. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
PublicNext
24/10/2026 10:36 pm