ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲಾ ಮಟ್ಟದ ಕ್ರೀಡಾಕೂಟ : ದಾಖಲೆಯೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪ್ರತಿಭಾನ್ವಿತ ಕ್ರೀಡಾಪಟು ಹೃತೀಶ್ ನಾಯ್ಕ

​ಸಿದ್ದಾಪುರ : ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಶಾಲಾ ಬಾಲಕರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ವಿದ್ಯಾರ್ಥಿ ಹೃತೀಶ್ ಮಂಜುನಾಥ ನಾಯ್ಕ ವಾಟಗಾರ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾನೆ.

​ತೀವ್ರ ಪೈಪೋಟಿಯಿಂದ ಕೂಡಿದ್ದ ಹ್ಯಾಮರ್ ಥ್ರೋ (Hammer Throw) ವಿಭಾಗದಲ್ಲಿ ಅಮೋಘ ಕೌಶಲ ಪ್ರದರ್ಶಿಸಿದ ಹೃತೀಶ್, ಬರೋಬ್ಬರಿ 51 ಮೀಟರ್ ದೂರ ಎಸೆಯುವ ಮೂಲಕ ನೂತನ ದಾಖಲೆಯೊಂದಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ. ಇದರೊಂದಿಗೆ ನಡೆದ ಡಿಸ್ಕಸ್ ಥ್ರೋ (Discus Throw) ಸ್ಪರ್ಧೆಯಲ್ಲೂ ಚುರುಕಿನ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಕ್ರೀಡಾಂಗಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈ ಎರಡೂ ವಿಭಾಗಗಳಲ್ಲಿನ ಉತ್ಕೃಷ್ಟ ಸಾಧನೆಯ ಫಲವಾಗಿ ಆತ ಮುಂಬರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾನೆ.

​ಮೂಲತಃ ಸಿದ್ದಾಪುರ ತಾಲೂಕಿನ ವಾಟಗಾರ ಗ್ರಾಮದವನಾದ ಹೃತೀಶ್ ಈತನಿಗೆ ಹರ್ಷ ಚಂದಾವರಕರ್ ಅವರು ತರಬೇತುದಾರರಾಗಿ ಮಾರ್ಗದರ್ಶನ ನೀಡಿದ್ದು, ಇವರ ನಿರಂತರ ಪ್ರೋತ್ಸಾಹ ಹಾಗೂ ತರಬೇತಿಯ ಫಲವಾಗಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ.

​ವಿದ್ಯಾರ್ಥಿಯ ಈ ಅಮೋಘ ಸಾಧನೆಗೆ ಶಾಲೆಯವರು , ಪಾಲಕರು ಹಾಗೂ ಊರಿನ ಗಣ್ಯರು ಹರ್ಷ ವ್ಯಕ್ತಪಡಿಸಿದ್ದು, ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮೆರೆದು ಜಿಲ್ಲೆಗೆ ಕೀರ್ತಿ ತರಲೆಂದು ಶುಭ ಹಾರೈಸಿದ್ದಾರೆ.

Edited By : PublicNext Desk
Kshetra Samachara

Kshetra Samachara

25/10/2026 08:25 pm

Cinque Terre

7.68 K

Cinque Terre

0

ಸಂಬಂಧಿತ ಸುದ್ದಿ