ಸಿದ್ದಾಪುರ: ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಶಾಲಾ ಬಾಲಕರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ವಿದ್ಯಾರ್ಥಿ ಹೃತೀಶ್ ಮಂಜುನಾಥ ನಾಯ್ಕ ವಾಟಗಾರ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾನೆ.
ರಾಜ್ಯದ ವಿವಿಧ ಜಿಲ್ಲೆಗಳ ನುರಿತ ಕ್ರೀಡಾಪಟುಗಳು ಭಾಗವಹಿಸಿದ್ದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಅದ್ಭುತ ಕೌಶಲ ಹಾಗೂ ದೈಹಿಕ ಸಾಮರ್ಥ್ಯ ಮೆರೆದ ಹೃತೀಶ್, ಬರೋಬ್ಬರಿ 47 ಮೀಟರ್ ದೂರಕ್ಕೆ ಹ್ಯಾಮರ್ ಎಸೆಯುವ ಮೂಲಕ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ. ಈ ಭರ್ಜರಿ ಯಶಸ್ಸಿನ ಫಲವಾಗಿ ಆತ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಶಾಲಾ ಕ್ರೀಡಾಕೂಟಕ್ಕೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾನೆ.
ಸಿದ್ದಾಪುರ ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಈತನು ಇತ್ತೀಚೆಗೆ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹ್ಯಾಮರ್ ಥ್ರೋ ವಿಭಾಗದಲ್ಲಿ 51 ಮೀಟರ್ ದೂರ ಎಸೆದು ದಾಖಲೆಯೊಂದಿಗೆ ಪ್ರಥಮ ಹಾಗೂ ಡಿಸ್ಕಸ್ ಥ್ರೋ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಹೆಜ್ಜೆ ಇಟ್ಟಿದ್ದ ಈತ, ಈಗ ರಾಜಧಾನಿಯಲ್ಲೂ ತನ್ನ ಪಾರಮ್ಯ ಮುಂದುವರಿಸಿ ರಾಷ್ಟ್ರ ಮಟ್ಟದ ಅಂಗಳಕ್ಕೆ ಲಗ್ಗೆಯಿಟ್ಟಿದ್ದಾನೆ.
ಹೃತೀಶ್‌ಗೆ ಹರ್ಷ ಚಂದಾವರಕರ್ ಅವರು ತರಬೇತುದಾರರಾಗಿ ತಾಂತ್ರಿಕ ಮಾರ್ಗದರ್ಶನ ನೀಡಿದ್ದು, ಇವರ ಕಠಿಣ ತರಬೇತಿ ಹಾಗೂ ಪ್ರೋತ್ಸಾಹ ಈ ಸಾಧನೆಗೆ ಪ್ರಮುಖ ಪ್ರೇರಣೆಯಾಗಿದೆ. ಗ್ರಾಮೀಣ ಭಾಗದ ಪ್ರತಿಭೆಯೊಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ತರಬೇತುದಾರ ಹರ್ಷ ಚಂದಾವರಕರ್ ಹಾಗೂ ಊರಿನ ಗಣ್ಯರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದು, ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆದ್ದು ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಅಭಿನಂದಿಸಿದ್ದಾರೆ.
Kshetra Samachara
03/11/2026 05:52 pm