ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಹಾಗೂ ರಸ್ತೆಬದಿ ಕಸ ಸುರಿದ ವಾಣಿಜ್ಯ ಸಂಸ್ಥೆಗಳಿಗೆ 20 ಸಾವಿರ ದಂಡ : ಆಯುಕ್ತ ಕೆ. ಎನ್. ರಮೇಶ್

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದ್ದು, ಬೃಹತ್ ತ್ಯಾಜ್ಯ ಉತ್ಪಾದಕರು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಕುರಿತಂತೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿರುತ್ತದೆ. ಆದಾಗ್ಯೂ, ಕೆಲವು ವಾಣಿಜ್ಯ ಸಂಸ್ಥೆಗಳು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯುವುದು ಹಾಗೂ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಆಗಿಂದಾಗೆ ಅಂತಹ ಸಂಸ್ಥೆಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿದೆ.

ಈ ಕಾರ್ಯಾಚರಣೆ ಅಂಗವಾಗಿ ಇಂದು ಜಯನಗರ ವ್ಯಾಪ್ತಿಯ ಪರಿಶೀಲನೆಯ ವೇಳೆ, ಪಟ್ಟಾಭಿರಾಮನಗರದ 5ನೇ ಮುಖ್ಯರಸ್ತೆಯಲ್ಲಿರುವ ‘ಚುಲ್ಹಾ ಚೌಕಿ ದಾ ಧಾಬಾ’ (Chulha Chauki Da Dhaba) ವಾಣಿಜ್ಯ ಸಂಸ್ಥೆಯಲ್ಲಿ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸದೆ, ಅಸಮರ್ಪಕ ನಿರ್ವಹಣೆ ಮಾಡುತ್ತಿರುವುದು ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ, ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ಜಕ್ಕಸಂದ್ರ ರಸ್ತೆಯಲ್ಲಿರುವ ಶೆಲ್ ಪೆಟ್ರೋಲ್ ಬಂಕ್ (ಅವಿಜ್ಞಾ ಎಂಟರ್‌ಪ್ರೈಸಸ್) ಬಳಿ ಸಾರ್ವಜನಿಕ ರಸ್ತೆಬದಿಯಲ್ಲೇ ಭಾರೀ ಪ್ರಮಾಣದಲ್ಲಿ ಮಿಶ್ರ ತ್ಯಾಜ್ಯ ಸುರಿದಿರುವುದು ಕಂಡುಬಂದಿದೆ.

ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿ ಅವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡಿದ್ದಕ್ಕಾಗಿ ‘ಚುಲ್ಹಾ ಚೌಕಿ ದಾ ಧಾಬಾ’ ಗೆ ಮಾರ್ಷಲ್ ಗಳು 10,000 ಸಾವಿರ ದಂಡ ವಿಧಿಸಿ ವಸೂಲಿ ಮಾಡಿದ್ದಾರೆ. ಅದೇ ರೀತಿ ಸಾರ್ವಜನಿಕ ರಸ್ತೆಬದಿ ಕಸ ಸುರಿದಿದ್ದಕ್ಕಾಗಿ ಎಚ್‌ಎಸ್‌ಆರ್ ಲೇಔಟ್‌ನ ಶೆಲ್ ಪೆಟ್ರೋಲ್ ಬಂಕ್ ಗೆ 10,000 ಸಾವಿರ ದಂಡ ವಿಧಿಸಿ, ಒಟ್ಟಾರೆಯಾಗಿ 20 ಸಾವಿರ ದಂಡ ವಸೂಲಿ ಮಾಡಲಾಗಿದೆ.

ದಂಡ ವಿಧಿಸಿದ ಬಳಿಕ ಸಂಬಂಧಪಟ್ಟ ಸಂಸ್ಥೆಗಳ ಸಿಬ್ಬಂದಿ ಹಾಗೂ ಮಾಲೀಕರಿಗೆ ತ್ಯಾಜ್ಯ ನಿರ್ವಹಣೆಯ ಮಹತ್ವದ ಕುರಿತು ಅಧಿಕಾರಿಗಳು ತಿಳಿವಳಿಕೆ ನೀಡಿದರು. ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ಕಡ್ಡಾಯವಾಗಿ ಹಸಿ, ಒಣ ಹಾಗೂ ಅಪಾಯಕಾರಿ ತ್ಯಾಜ್ಯವೆಂದು ವಿಂಗಡಿಸಬೇಕು ಮತ್ತು ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಬದಿಯಲ್ಲಿ ಕಸ ಸುರಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೋಟೆಲ್‌ಗಳು, ಧಾಬಾಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿದು ನಗರದ ಸೌಂದರ್ಯ ಹಾಗೂ ನೈರ್ಮಲ್ಯಕ್ಕೆ ಧಕ್ಕೆ ತರುವವರ ವಿರುದ್ಧ ಮುಲಾಜಿಲ್ಲದೆ ನಿರಂತರ ತಪಾಸಣೆ ನಡೆಸಿ ದಂಡ ಹಾಗೂ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಜಯನಗರ ಹಾಗೂ ಎಚ್‌ಎಸ್‌ಆರ್ ಲೇಔಟ್ ವಿಭಾಗೀಯ ಮಾರ್ಷಲ್ ಸೂಪರ್‌ವೈಸರ್, ವಾರ್ಡ್ ಮಾರ್ಷಲ್‌ಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

29/10/2026 07:51 pm

Cinque Terre

100

Cinque Terre

0