ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು,: ರಸ್ತೆಗಿಳಿಯದ ಆಟೋ, ಪ್ರಯಾಣಿಕರ ಪರದಾಟ

ಮಡಿಕೇರಿ: ರ‍್ಯಾಪಿಡೋ ಸೇವೆ ವಿರೋಧಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ನಗರದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಸಂತೆ ದಿನವಾದ್ದರಿಂದ ಮಾರುಕಟ್ಟೆಗೆ ಆಗಮಿಸಿದ್ದ ಜನರು ಸಂಚಾರಕ್ಕೆ ವಾಹನಗಳು ದೊರೆಯದೆ ತೊಂದರೆ ಅನುಭವಿಸಿದರು. ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋಗಳೂ ರಸ್ತೆಗಿಳಿಯದ ಕಾರಣ ಪೋಷಕರೇ ಮಕ್ಕಳನ್ನು ಶಾಲೆಗೆ ಕರೆದೊಯ್ಯಬೇಕಾಯಿತು. ಇದೇ ವೇಳೆ ಆಟೋ ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಎವಿ ಶಾಲೆಯಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ರ‍್ಯಾಪಿಡೋ ಸೇವೆ ಸ್ಥಗಿತಗೊಳಿಸಬೇಕು ಹಾಗೂ ಅನುಮತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌ಗಳನ್ನು ರಸ್ತೆಗಿಳಿಸುತ್ತಿರುವ ರೆಂಟಲ್ ಬೈಕ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್. ಮೇದಪ್ಪ ಮಾತನಾಡಿ, ಜಿಲ್ಲೆಯಲ್ಲಿ 12 ಸಾವಿರಕ್ಕೂ ಅಧಿಕ ಆಟೋಗಳು ಹಾಗೂ 2 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿಗಳು ಸಂಚರಿಸುತ್ತಿವೆ. ಈಗಾಗಲೇ ರೆಂಟಲ್ ಬೈಕ್‌ಗಳಿಂದ ಸಂಕಷ್ಟ ಎದುರಿಸುತ್ತಿರುವ ಸ್ಥಳೀಯ ಚಾಲಕರಿಗೆ ರ‍್ಯಾಪಿಡೋ ಸೇವೆ ಮತ್ತಷ್ಟು ಹೊಡೆತ ನೀಡಲಿದೆ. ಅನುಮತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌ಗಳನ್ನು ರಸ್ತೆಗಿಳಿಸಲಾಗುತ್ತಿದ್ದು, ವೈಟ್‌ಬೋರ್ಡ್ ವಾಹನಗಳ ಮೂಲಕ ಬಾಡಿಗೆ ಸೇವೆ ನಡೆಸಲಾಗುತ್ತಿದೆ. ಇಂತಹ ವಾಹನಗಳ ವಿರುದ್ಧ ಪೊಲೀಸ್ ಮತ್ತು ಸಾರಿಗೆ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು. ಪ್ರವಾಸಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷ ಸಂತೋಷ್ ಕಾರ್ಯಪ್ಪ ಮಾತನಾಡಿ, ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ರ‍್ಯಾಪಿಡೋ ಸೇವೆಯ ಅಗತ್ಯವಿಲ್ಲ. ರೆಂಟಲ್ ಬೈಕ್‌ಗಳಲ್ಲಿ ನಿಯಮ ಉಲ್ಲಂಘಿಸಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದ್ದು, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದರು. ನಂತರ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೋಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರ‍್ಯಾಪಿಡೋ ಮತ್ತು ರೆಂಟಲ್ ಬೈಕ್ ಸಂಚಾರದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ವೈಟ್‌ಬೋರ್ಡ್ ಬೈಕ್‌ಗಳ ಬಗ್ಗೆ ಪರಿಶೀಲನೆ ನಡೆಸಲು ಸಾರಿಗೆ ಇಲಾಖೆಗೆ ಸೂಚಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಭರವಸೆ ನೀಡಿದರು.

Edited By :
PublicNext

PublicNext

31/10/2026 08:17 am

Cinque Terre

8.09 K

Cinque Terre

0

ಸಂಬಂಧಿತ ಸುದ್ದಿ