ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ : ಜಿಲ್ಲೆಯಾದ್ಯಂತ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅವಶ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಐದು ತಾಲೂಕುಗಳು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದರೂ ಇತ್ತೀಚೆಗೆ ಹಿಂಗಾರು ಚುರುಕುಗೊಂಡಿದೆ. ಸಾಧ್ಯವಾದಷ್ಟು ಉತ್ತಮ ಮಳೆ ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ತಹಸೀಲ್ದಾರ್ ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಟಾಸ್ಕ್‍ಪೋರ್ಸ್ ಸಭೆಗಳನ್ನು ನಡೆಸಿ, ಜನರ ಕುಂದುಕೊರತೆ ಆಲಿಸಬೇಕು. ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಪ್ರಸ್ತುತ ಜಿಲ್ಲೆಯ ಹನೂರು ತಾಲೂಕಿನ ಆರು ಗ್ರಾಮಪಂಚಾಯಿತಿಗಳ 7 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತಹ ಕಡೆ ಖಾಸಗಿ ಬೋರ್‍ವೆಲ್‍ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು. ಅಗತ್ಯವಿದ್ದರೆ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಬೇಕು. ಜಿಲ್ಲೆಯಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ನೀರಿನ ಸಮಸ್ಯೆಯಾಗಬಹುದು. ಹಾಗಾಗಿ ಸಂಬಂಧಪಟ್ಟ ಟಾಸ್ಕ್ ಪೋರ್ಸ್ ಹಾಗೂ ನೋಡೆಲ್ ಅಧಿಕಾರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಈಗಿನಿಂದಲೇ ಗುರುತಿಸಲು ಮುಂದಾಗಬೇಕು. ಆರ್.ಓ ಪ್ಲಾಂಟ್‍ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದರು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೊಸದಾಗಿ ಕೊರೆಸಿರುವ ಬೋರ್‍ವೆಲ್‍ಗಳಲ್ಲಿ ಪೈಪ್‍ಲೈನ್ ಕಾಮಗಾರಿ ಸಮರ್ಪಕವಾಗಿರಬೇಕು. ಮೋಟಾರ್ ಅಳವಡಿಸಿರಬೇಕು. ಇದಕ್ಕಾಗಿ ತಾಲೂಕು ಪಂಚಾಯಿತಿ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಬೇಕು. ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಬೇಕು. ಈ ಸಂಬಂಧ ಪಂಚಾಯಿತಿಗಳಲ್ಲಿ ಕೊರೆಸಿರುವ ಬೋರ್‍ವೆಲ್, ಪೈಪ್‍ಲೈನ್ ಹಾಗೂ ಮೋಟಾರು ಅಳವಡಿಸಿರುವ ಕುರಿತ ಸಮಗ್ರ ವರದಿ ಸಲ್ಲಿಸುವಂತೆ ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Edited By : PublicNext Desk
Kshetra Samachara

Kshetra Samachara

04/11/2026 04:09 pm

Cinque Terre

300

Cinque Terre

0

ಸಂಬಂಧಿತ ಸುದ್ದಿ