ದಾವಣಗೆರೆ: ಜಗಳೂರು ತಾಲ್ಲೂಕಿನ ಮಹತ್ವಾಕಾಂಕ್ಷೆಯ 57 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ಕಿಡಿಗೇಡಿಗಳ ಕಾಟ ಶುರುವಾಗಿದ್ದು, ಯೋಜನೆಯ ನಿರ್ವಹಣೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈರಾಣಾಗಿದ್ದಾರೆ.
ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ ಕೊನೆಯ ಭಾಗವಾದ ಗುರುಸಿದ್ದಾಪುರ ಕೆರೆಯವರೆಗೆ ಪೈಪ್‌ಲೈನ್ ಮೂಲಕ ಪ್ರಾಯೋಗಿಕವಾಗಿ ನೀರು ಹರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಮಾರ್ಗಮಧ್ಯೆ ತುಪ್ಪದಹಳ್ಳಿ ಕೆರೆ ವ್ಯಾಪ್ತಿಯಲ್ಲಿ ಕೆಲ ಕಿಡಿಗೇಡಿಗಳು ತಮ್ಮ ಭಾಗದ ಕೆರೆಗಳೇ ಮೊದಲು ತುಂಬಲಿ ಎಂಬ ಸ್ವಾರ್ಥದಿಂದ ಎಲ್ಲೆಂದರಲ್ಲಿ ನೀರಿನ ವಾಲ್ವ್‌ಗಳನ್ನು ರಾತ್ರೋರಾತ್ರಿ ತಿರುಗಿಸುತ್ತಿದ್ದಾರೆ.
ವಾಲ್ವ್‌ಗಳನ್ನು ಬೇಕಾಬಿಟ್ಟಿ ತಿರುಗಿಸುತ್ತಿರುವುದರಿಂದ ಅತ್ಯಂತ ರಭಸದಿಂದ ನೀರು ಆಗಸದೆತ್ತರಕ್ಕೆ ಚಿಮ್ಮುತ್ತಿದ್ದು, ಪೈಪ್‌ಲೈನ್‌ಗಳು ಹಾನಿಗೊಳಗಾಗುತ್ತಿವೆ. ಪ್ರಸ್ತುತ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಆದ್ಯತೆ ಹಾಗೂ ನೀರಿನ ಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ನೀರು ಪೂರೈಸಲಾಗುತ್ತಿತ್ತು. ಆದರೆ ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಮುಂದಿನ ಭಾಗದ ಕೆರೆಗಳಿಗೆ ಸಮರ್ಪಕವಾಗಿ ನೀರು ತಲುಪದೆ ಅಭಾವ ಎದುರಾಗಿದೆ.
ಸಮಸ್ಯೆಯಾದ ಸ್ಥಳಕ್ಕೆ ತೆರಳಿ ದುರಸ್ತಿ ಮಾಡಿ ಬಂದ ಮರುದಿನವೇ ಮತ್ತೆ ರಾತ್ರೋರಾತ್ರಿ ವಾಲ್ವ್ ತಿರುಗಿಸುವುದು ಮತ್ತು ಪೈಪ್ ಹಾನಿಗೊಳಿಸುವ ಕೆಲಸ ಮುಂದುವರಿದಿದೆ. ಈ ಕಿಡಿಗೇಡಿಗಳ ಕೃತ್ಯದಿಂದ ಯೋಜನೆ ನಿರ್ವಹಣೆ ಮಾಡುತ್ತಿರುವ 'ಜೆ-ಶಂಕರ್' ಕಂಪನಿ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕಂಗೆಟ್ಟಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
PublicNext
04/11/2026 04:16 pm