ಬೆಳಗಾವಿ : ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ಕರೆ ನೀಡಿದ್ದ ಹಿಂಡಲಗಾ ಜೈಲ್ ಭರೋ ಚಳವಳಿಗೆ ಪೊಲೀಸರು ತಡೆಯೊಡ್ಡಿದ್ದು, ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಮುಕ್ತಿಮಠದಿಂದ ಪಾದಯಾತ್ರೆ ಆರಂಭಿಸುವ ಮುನ್ನವೇ ಪೊಲೀಸರು ಕಾರ್ಯಾಚರಣೆ ನಡೆಸಿ ರೈತರನ್ನು ವಶಕ್ಕೆ ಪಡೆದಿದ್ದಾರೆ.
ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಆರಂಭವಾಗಬೇಕಿದ್ದ ಪಾದಯಾತ್ರೆಯನ್ನು ತಡೆಯಲು ಪೊಲೀಸರು ಮುಕ್ತಿಮಠದ ಬಳಿ ಜಮಾಯಿಸಿದ್ದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಬಲವಂತವಾಗಿ ನೂರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಚೂನಪ್ಪ ಪೂಜಾರಿ, ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿ ರೈತರಿಗೆ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹1,000 ದರ ಘೋಷಣೆ ಮಾಡಲೇಬೇಕು. ಪೊಲೀಸರ ಕ್ರಮದಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತರು ವಿವಿಧೆಡೆ ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ.
ಜೈಲ್ ಭರೋ ಚಳವಳಿಗೂ ಮುನ್ನವೇ ರೈತರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮದಿಂದ ಮುಕ್ತಿಮಠದ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಬ್ಬಿನ ದರ ಹೆಚ್ಚಳದ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
PublicNext
05/11/2026 11:08 am
LOADING...