ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ₹2.68 ಕೋಟಿ ದರೋಡೆ ಕೇಸ್; ನಾಲ್ಕೇ ದಿನಗಳಲ್ಲಿ ಭೇದಿಸಿದ ಮೂಡಲಗಿ ಪೊಲೀಸರು

ಮೂಡಲಗಿ: ಪಟ್ಟಣದ ಹೊರವಲಯದ ತೋಟದ ಶೆಡ್‌ನಲ್ಲಿ ನಡೆದ ಬರೋಬ್ಬರಿ ₹2.68 ಕೋಟಿ ದರೋಡೆ ಪ್ರಕರಣವನ್ನು ಮೂಡಲಗಿ ಪೊಲೀಸರು ಕೇವಲ ನಾಲ್ಕೇ ದಿನಗಳಲ್ಲಿ ಭೇದಿಸಿ, ದರೋಡೆಯಾದ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 30ರಂದು ಶುಕ್ರವಾರ ತಡರಾತ್ರಿ ಈ ದರೋಡೆ ಘಟನೆ ನಡೆದಿತ್ತು. ಈ ಕುರಿತು ಶನಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ಡಿಎಸ್ಪಿ ರವಿ ನಾಯಕ ಅವರ ನೇತೃತ್ವದಲ್ಲಿ ಸಿಪಿಐ ಶ್ರೀಶೈಲ್ ಬ್ಯಾಕೋಡ್, ಪಿಎಸ್ಐ ಎಸ್.ಡಿ. ಯಡಹಳ್ಳಿ, ರಾಜೀವ ಪೂಜಾರಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.

ತೀವ್ರ ತನಿಖೆ ಹಾಗೂ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ನಾಲ್ಕು ದಿನಗಳೊಳಗಾಗಿ ದರೋಡೆಯಾದ ₹2.68 ಕೋಟಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಗನ್‌ಮ್ಯಾನ್ ಚಿದಾನಂದ ಕುರಬೇಟ (ಸಂಗನಕೇರಿ), ಸಂಜೀವ ರಾಮಪ್ಪ ಅರಭಾವಿ (ತುಕ್ಕಾನಟ್ಟಿ), ರಾಜಾರಾಮ ಸುರೇಶ ಮಾಳ್ಯಾಗೋಳ (ಸಂಗನಕೇರಿ), ರಮೇಶ ದುಂಡಪ್ಪ ಮಾಳ್ಯಾಗೋಳ (ಸಂಗನಕೇರಿ), ವಿಠಲ ಸುರೇಶ ಮಾಳ್ಯಾಗೋಳ (ಸಂಗನಕೇರಿ), ಪ್ರಕಾಶ ರಾಮಲಿಂಗಪ್ಪ ಮೇಲವಂಕಿ (ಅಂಬೇಡ್ಕರ್ ನಗರ, ಗೋಕಾಕ) ಹಾಗೂ ರಾಘವೇಂದ್ರ ಪ್ರಕಾಶ ಕೊಪ್ಪದ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ. ದರೋಡೆಗೆ ಬಳಸಿದ್ದ ಎರಡು ಮೋಟಾರ್ ಸೈಕಲ್‌ಗಳು, ಒಂದು ಕಾರು ಹಾಗೂ ಎರಡು ಹಣ ಎಣಿಕೆ ಯಂತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಕುರಿತು ಬುಧವಾರ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಭೇದಿಸಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡ ಮೂಡಲಗಿ ಪೊಲೀಸ್ ತಂಡದ ಕಾರ್ಯವನ್ನು ವಿವರಿಸಿದರು.

ಕೋಟ್ಯಂತರ ರೂಪಾಯಿ ದರೋಡೆ ಪ್ರಕರಣವನ್ನು ನಾಲ್ಕೇ ದಿನಗಳಲ್ಲಿ ಭೇದಿಸಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡ ಮೂಡಲಗಿ ಪೊಲೀಸರ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Edited By :
PublicNext

PublicNext

04/11/2026 05:41 pm

Cinque Terre

6.14 K

Cinque Terre

0

ಸಂಬಂಧಿತ ಸುದ್ದಿ