ಬೆಳಗಾವಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಲು ರೈತರು ಮುಂದಾದ ಘಟನೆ ಬುಧವಾರ ನಡೆದಿದೆ.
ರೈತ ಮುಖಂಡ ಗಣೇಶ ಇಳಿಗೇರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರು, ಕೊಟ್ಟ ಮಾತಿನಂತೆ ಸಭೆ ನಡೆಸಿ ಕಬ್ಬಿನ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಬೆಳಗ್ಗೆಯಿಂದಲೇ ಸಭೆಗಾಗಿ ಕಾಯುತ್ತಿದ್ದರೂ ಅಧಿಕಾರಿಗಳು ಸಭೆ ನಡೆಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರಕ್ಕೆ ಬೀಗ ಹಾಕಲು ರೈತರು ಯತ್ನಿಸಿದ್ದು, ಪೊಲೀಸರು ತಡೆಯಲು ಮುಂದಾದಾಗ ರೈತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ನೂಕಾಟ-ತಳ್ಳಾಟ ಉಂಟಾಗಿ ಮಹಿಳೆಯೊಬ್ಬರಿಗೆ ಗಾಯವಾಗಿದೆ.
ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸದಿದ್ದರೆ ಕೆಲವೇ ಕ್ಷಣಗಳಲ್ಲಿ ಚನ್ನಮ್ಮ ವೃತ್ತವನ್ನು ಬಂದ್ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಇಷ್ಟಾದರೂ ಅಧಿಕಾರಿಗಳು ಇದೇ ರೀತಿ ಕಾಲಹರಣ ಮಾಡಿದರೆ ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ. ಕಬ್ಬಿನ ದರ ನಿಗದಿ ಕುರಿತು ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಆಕ್ರೋಶ ಭುಗಿಲೆದ್ದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
PublicNext
04/11/2026 08:38 pm
LOADING...