ಬೆಳಗಾವಿ: ಕಬ್ಬಿನ ದರ ನಿಗದಿ ವಿಚಾರವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ನಾಳೆಯೊಳಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ಬೆಳಗಾವಿಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಿನ್ನೆ ರೈತರ ಮನವಿ ಮೇರೆಗೆ ಮತ್ತೊಮ್ಮೆ ಸಭೆ ನಡೆಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿದ್ದರೂ, ರೈತರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಮತ್ತೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ರೈತರ ಬೇಡಿಕೆಗಳು ಹಾಗೂ ಕಾರ್ಖಾನೆ ಮಾಲೀಕರ ಬೇಡಿಕೆಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಕಬ್ಬಿನ ದರ ನಿಗದಿ ವಿಳಂಬವಾಗುತ್ತಿದೆ. ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಪ್ರತ್ಯೇಕ ಸಭೆ ನಡೆಸುವ ಚಿಂತನೆಯೂ ಇದೆ. ಅಗತ್ಯವಿದ್ದರೆ ನಾಳೆಯೂ ಕಾರ್ಖಾನೆ ಮಾಲೀಕರ ಸಭೆ ನಡೆಸಲಾಗುವುದು ಎಂದರು.
ಇಂದಿನ ಸಭೆಯಲ್ಲಿ ಶೇ.50ರಷ್ಟು ಪ್ರಗತಿ ಸಾಧಿಸಲಾಗಿದೆ. ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಂದು ನಿರ್ದಿಷ್ಟ ದರದ ಅಂತರವಿದ್ದು, ಅದನ್ನು ಹತ್ತಿರ ತರುವ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಮತ್ತೊಂದು ಸಭೆ ನಡೆಸಲಾಗುವುದು ಎಂದು ಹೇಳಿದರು.
ಎಸ್ಎಪಿ ಮತ್ತು ಎಂಎಸ್ಪಿ ವಿಚಾರದಲ್ಲಿ ಸರ್ಕಾರ ನೇರವಾಗಿ ರೈತರ ಪರವಾಗಿ ಕ್ರಮ ಕೈಗೊಳ್ಳಲಿದೆ. ಸಕ್ಕರೆ ಬೆಲೆಯಲ್ಲಿ ಪ್ರತಿದಿನ ಬದಲಾವಣೆಯಾಗುತ್ತಿರುವುದರಿಂದ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸುವಂತೆ ನಾವು ಒತ್ತಾಯಿಸಿದ್ದೇವೆ. ಎಂಎಸ್ಪಿ ನಿಗದಿಯಾದರೆ ಕಾರ್ಖಾನೆ ಮಾಲೀಕರಿಗೂ ಧೈರ್ಯ ಬರಲಿದೆ ಎಂದು ಅಭಿಪ್ರಾಯಪಟ್ಟರು.
ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಹೊಂದಾಣಿಕೆ ಮೂಡಿಸುವ ಜವಾಬ್ದಾರಿ ಸಚಿವನಾಗಿ ನನ್ನ ಮೇಲಿದೆ. ಇಬ್ಬರ ನಡುವೆ ಒಮ್ಮತ ಮೂಡಿದ ಬಳಿಕ ಅಂತಿಮ ನಿರ್ಧಾರವನ್ನು ರೈತರಿಗೆ ತಿಳಿಸಲಾಗುವುದು. ರೈತರು ಒಪ್ಪಿಗೆ ಸೂಚಿಸಿದರೆ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದರೆ ಮತ್ತೆ ಸಮಸ್ಯೆ ಎದುರಾಗಲಿದೆ. ನಾಳೆಯೊಳಗೆ ವಿವಾದ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
PublicNext
03/11/2026 10:39 pm
LOADING...