ಬೆಳಗಾವಿ : ಪ್ರೀತಿ, ನಂಬಿಕೆ, ಮದುವೆಯ ಭರವಸೆ... ಹೀಗೆ ಮೂರು-ನಾಲ್ಕು ವರ್ಷಗಳಿಂದ ಮುಂದುವರಿದಿದ್ದ ಪ್ರೇಮ ಸಂಬಂಧ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಗೋಕಾಕ ಫಾಲ್ಸ್‌ನಲ್ಲಿ ಬೆಳಕಿಗೆ ಬಂದಿದೆ.
ಕೊಲೆಯಾದ ಯುವತಿಯನ್ನು ರಕ್ಷಿತಾ (25) ಎಂದು ಗುರುತಿಸಲಾಗಿದ್ದು, ಬಸಪ್ಪ (29) ಕೊಲೆ ಆರೋಪಿಯಾಗಿದ್ದಾನೆ. ಆರೋಪಿಯು ಕಳೆದ ಮೂರು-ನಾಲ್ಕು ವರ್ಷಗಳಿಂದ ರಕ್ಷಿತಾಳನ್ನು ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸುತ್ತಾ ಬಂದಿದ್ದರೂ, ಮದುವೆಯ ಪ್ರಸ್ತಾಪ ಬಂದಾಗಲೆಲ್ಲ ಒಂದಲ್ಲೊಂದು ನೆಪ ಹೇಳಿ ಮುಂದೂಡುತ್ತಿದ್ದ ಎನ್ನಲಾಗಿದೆ.
ಅಕ್ಟೋಬರ್ 28ರಂದು ಆರೋಪಿ ಬಸಪ್ಪ, ರಕ್ಷಿತಾಳನ್ನು ಹಾರೂಗೇರಿಯಿಂದ ಗೋಕಾಕ ಫಾಲ್ಸ್‌ಗೆ ಕರೆದುಕೊಂಡು ಬಂದಿದ್ದ. ಸಂಜೆ ಸುಮಾರು 4 ಗಂಟೆಯ ವೇಳೆಗೆ ಫಾಲ್ಸ್ ರಸ್ತೆಯ ಬದಿಯ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತನಾಡುತ್ತಿದ್ದರು. ಈ ವೇಳೆ, ಮದುವೆಯಾಗುವುದಾಗಿ ಭರವಸೆ ನೀಡಿ ವರ್ಷಗಳೇ ಕಳೆದರೂ ಯಾಕೆ ಮದುವೆಯಾಗುತ್ತಿಲ್ಲ ಎಂದು ರಕ್ಷಿತಾ ಪ್ರಶ್ನಿಸಿದ್ದಾಳೆ.
ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಆರೋಪಿ, ಯುವತಿಯ ಕಿವಿ ಹಾಗೂ ಕೆನ್ನೆಯ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಕೈಗಳಿಂದ ಕುತ್ತಿಗೆ ಹಿಸುಕಿ, ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗೋಕಾಕ ಫಾಲ್ಸ್‌ನ ಗುಡ್ಡದ ಇಳಿಜಾರಿನಲ್ಲಿದ್ದ ಕಂಟೆಗಳ ಮಧ್ಯೆ ಮೃತದೇಹವನ್ನು ಎಸೆದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಒಟ್ಟಿನಲ್ಲಿ, ಮೂರು-ನಾಲ್ಕು ವರ್ಷಗಳ ಪ್ರೀತಿಯ ಸಂಬಂಧಕ್ಕೆ ಮದುವೆಯ ಭರವಸೆಯೇ ಆಧಾರವಾಗಿತ್ತೇ? ಮದುವೆಯಾಗುವಂತೆ ಕೇಳಿದ್ದೇ ಯುವತಿಯ ಜೀವಕ್ಕೆ ಕುತ್ತಾಯಿತೇ? ಪ್ರೀತಿಯ ಹೆಸರಿನಲ್ಲಿ ನಡೆದ ಈ ಭೀಕರ ಕೃತ್ಯದ ಹಿಂದಿನ ಸಂಪೂರ್ಣ ಸತ್ಯ ಇನ್ನಷ್ಟೇ ತನಿಖೆಯಿಂದ ಹೊರಬರಬೇಕಿದೆ.
PublicNext
05/11/2026 03:24 pm
LOADING...