ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಷ್ಟು ದಿನದ ಲವ್‌ ಸಸ್ಪೆನ್ಸ್‌ಗೆ ತೆರೆ..ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ ಶಿಶಿರ್‌–ಐಶ್ವರ್ಯ

ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಮನೆಮಾತಾಗಿದ್ದ ಕಿರುತೆರೆ ತಾರೆಯರಾದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಸಿಂಧೋಗಿ ಕಡೆಗೂ ತಮ್ಮ ಅಭಿಮಾನಿಗಳಿಗೆ ಬಹುನಿರೀಕ್ಷಿತ ‘ಬಿಗ್ ನ್ಯೂಸ್‌’ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ಅಂತೆ-ಕಂತೆಗಳಿಗೆ ಅಧಿಕೃತವಾಗಿ ತೆರೆ ಎಳೆದಿರುವ ಈ ಜೋಡಿ, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದೆ.

ಕಿರುತೆರೆಯ ಜನಪ್ರಿಯ ಕಲಾವಿದರಾಗಿದ್ದ ಶಿಶಿರ್ ಮತ್ತು ಐಶ್ವರ್ಯಾ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಈ ಶೋನಲ್ಲಿ ಇಬ್ಬರ ವ್ಯಕ್ತಿತ್ವ, ಪರಸ್ಪರರ ಜೊತೆಗಿನ ಒಡನಾಟ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಶೋ ಮುಗಿದ ಬಳಿಕವೂ ಇವರಿಬ್ಬರು ಸದಾ ಒಟ್ಟಾಗಿ ಕಾಣಿಸಿಕೊಳ್ಳುತ್ತಾ, ಪ್ರವಾಸ, ಪಾರ್ಟಿ ಹಾಗೂ ರೀಲ್ಸ್‌ಗಳಲ್ಲಿ ಜೊತೆಯಾಗಿ ಮಿಂಚುತ್ತಿದ್ದರು.

ಆದರೆ, ಮಾಧ್ಯಮಗಳಲ್ಲಾಗಲಿ ಅಥವಾ ಅಭಿಮಾನಿಗಳ ಮುಂದಾಗಲಿ ತಮ್ಮ ನಡುವಿನ ಪ್ರೀತಿ-ಪ್ರಣಯದ ಬಗ್ಗೆ ಪ್ರಶ್ನೆಗಳು ಎದುರಾದಾಗಲೆಲ್ಲಾ ‘ನಾವಿಬ್ಬರೂ ಬೆಸ್ಟ್‌ ಫ್ರೆಂಡ್ಸ್‌ ಅಷ್ಟೇ’ ಎಂದು ಹೇಳುತ್ತಾ ನುಣುಚಿಕೊಳ್ಳುತ್ತಿದ್ದರು. ಆದಾಗ್ಯೂ, ಇವರ ಕೆಮಿಸ್ಟ್ರಿ ನೋಡಿದ ನೆಟ್ಟಿಗರು ಇವರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಪ್ರೀತಿಯಿದೆ ಎಂದು ಚರ್ಚೆ ನಡೆಸುತ್ತಲೇ ಇದ್ದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವೀಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಈ ಜೋಡಿ ತಮ್ಮ ಬಾಂಧವ್ಯವನ್ನು ಅಧಿಕೃತಗೊಳಿಸಿದೆ. ಜನರಲ್ಲಿ ಮತ್ತು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ಮಾತುಗಳಿಗೆ ಸ್ಪಷ್ಟನೆ ನೀಡಿರುವ ಇಬ್ಬರು, “ನಾವು ಶೀಘ್ರದಲ್ಲೇ ಎಂಗೇಜ್‌ಮೆಂಟ್‌ ಮಾಡಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದ್ದಾರೆ. ತಮ್ಮ ಪೋಸ್ಟ್‌ಗೆ ಸುಂದರ ಕ್ಯಾಪ್ಷನ್ ಬರೆದುಕೊಂಡಿರುವ ಜೋಡಿ, “ಊಹೆಗಳ ಹಿಂದೆ ಒಂದು ಕಥೆಯಿತ್ತು… ನಗುವಿನ ಹಿಂದೆ ಒಂದು ಪ್ರೀತಿಯಿತ್ತು… ಕಾಮೆಂಟ್‌ಗಳ ಹಿಂದೆ ನಿಮ್ಮ ಕುತೂಹಲವಿತ್ತು… ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR! ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು. ಇದು ಕೇವಲ ವದಂತಿಯಲ್ಲ, ನಮ್ಮ ಹೊಸ ಜೀವನದ ಸುಂದರ ಆರಂಭ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಶಿಶಿರ್ ಶಾಸ್ತ್ರಿ ಪ್ರಸ್ತುತ ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಮೂಲಕ ನಟನೆಯಲ್ಲಿ ಸಕ್ರಿಯರಾಗಿದ್ದರೆ, ಐಶ್ವರ್ಯಾ ಸಿಂಧೋಗಿ ಕೂಡ ತಮ್ಮ ಉದ್ಯಮ ಹಾಗೂ ವೈಯಕ್ತಿಕ ಪ್ರಾಜೆಕ್ಟ್‌ಗಳಲ್ಲಿ ಕಾರ್ಯನಿರತರಾಗಿದ್ದಾರೆ. ಇಷ್ಟು ದಿನ ತೆರೆಯ ಮರೆಯಲ್ಲಿದ್ದ ಪ್ರೇಮಕಥೆ ಈಗ ಮುನ್ನೆಲೆಗೆ ಬಂದಿದ್ದು, ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲು ಸಜ್ಜಾಗುತ್ತಿದೆ.

Edited By : Nirmala Aralikatti
PublicNext

PublicNext

05/11/2026 01:06 pm

Cinque Terre

11.69 K

Cinque Terre

0