ಬೆಂಗಳೂರು : ಬಹುದೊಡ್ಡ ನಿರೀಕ್ಷೆಯೊಂದಿಗೆ ತೆರೆಕಂಡಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯ ದಿನವೇ ಸಿನಿಪ್ರಿಯರ ಗಮನ ಸೆಳೆದಿದೆ. ಭಾರತೀಯ ಪೌರಾಣಿಕ ಕಥೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ಕನ್ನಡದ ನಟ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಮೂಡಿದೆ. ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿಪಲ್ಲವಿ ಸೀತೆಯಾಗಿ ಅಭಿನಯಿಸಿದ್ದಾರೆ.
ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ವಿಶ್ವದಾದ್ಯಂತ 50 ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದೆ ಎನ್ನಲಾಗಿದೆ. ಭಾರತದಲ್ಲಿ ಸುಮಾರು 9 ಸಾವಿರ ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಕರ್ನಾಟಕದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದೆ. ಚಿತ್ರ ಬಿಡುಗಡೆಯಾಗುವ ಮೊದಲೇ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಿಂದ 100 ಕೋಟಿ ರೂಪಾಯಿ ಗಳಿಸಿದೆ ಎಂಬ ವರದಿಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.
ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಚಿತ್ರಮಂದಿರಗಳ ಬಳಿ ಅಭಿಮಾನಿಗಳ ಸಂಭ್ರಮ ಕಂಡುಬಂದಿದೆ. ಅದರಲ್ಲೂ ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಿದ್ದು, ಯಶ್ ಅಭಿಮಾನಿಗಳು ಮುಂಜಾನೆಯಿಂದಲೇ ನೆಚ್ಚಿನ ನಟನ ಚಿತ್ರ ವೀಕ್ಷಿಸಲು ಆಗಮಿಸಿದ್ದಾರೆ.
ಚಿತ್ರಮಂದಿರದ ಮುಂಭಾಗದಲ್ಲಿ ಯಶ್ ಅವರ ಬೃಹತ್ ಕಟೌಟ್ ಸ್ಥಾಪಿಸಿ, ಅಭಿಮಾನಿಗಳು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲವರು ದೃಷ್ಟಿ ತೆಗೆದು, ಕುಂಬಳಕಾಯಿ ಒಡೆದು ಸಂಭ್ರಮಿಸಿದರೆ, ಮತ್ತೊಂದೆಡೆ ಪಟಾಕಿ ಸಿಡಿಸಿ, ಡೊಳ್ಳು ಕುಣಿತದ ಮೂಲಕ ತಮ್ಮ ನೆಚ್ಚಿನ ನಟನಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ವಿಶೇಷವಾಗಿ ರಾವಣನ ಪಾತ್ರದಲ್ಲಿ ಯಶ್ ಅವರನ್ನು ತೆರೆಮೇಲೆ ಕಾಣಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವುದು ಸಿನಿಮಾ ಬಿಡುಗಡೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
PublicNext
05/11/2026 08:45 am