ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: 'ಶೌರ್ಯ' ಸಾವಿಗೆ ಒಂದು ತಿಂಗಳು; ಅರಣ್ಯ ಇಲಾಖೆ ಕಚೇರಿ ಮುಂದೆ ಕಣ್ಣೀರಿನ ಶ್ರದ್ಧಾಂಜಲಿ, ಮೌನ ಪ್ರತಿಭಟನೆ

​ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಜನಪ್ರಿಯ ಆನೆ 'ಶೌರ್ಯ' ಅನುಮಾನಾಸ್ಪದವಾಗಿ ಕೊನೆಯುಸಿರೆಳೆದು ಇಂದಿಗೆ ಭರ್ತಿ ಒಂದು ತಿಂಗಳು ಕಳೆದ ಹಿನ್ನೆಲೆಯಲ್ಲಿ, ಶಿವಮೊಗ್ಗದ ಅರಣ್ಯ ಇಲಾಖೆ ಕಚೇರಿಯ ಮುಂಭಾಗದಲ್ಲಿ ಪ್ರಾಣಿಪ್ರಿಯರು ಹಾಗೂ ಕರವೇ ಸಿಂಹಸೇನೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಮೌನ ಪ್ರತಿಭಟನೆ ನಡೆಯಿತು.

​ಪ್ರತಿಭಟನಾಕಾರರು ಅರಣ್ಯ ಇಲಾಖೆ ಕಚೇರಿಯ ಮುಖ್ಯ ಗ್ರಿಲ್‌ಗೆ ಶೌರ್ಯ ಆನೆಯ ಬ್ಯಾನರ್ ಕಟ್ಟಿ, ದೂಪ-ದೀಪಗಳೊಂದಿಗೆ ಭಾವುಕ ಪೂಜೆ ನೆರವೇರಿಸಿ ತಮ್ಮ ಆಕ್ರೋಶ ಹಾಗೂ ದುಃಖವನ್ನು ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಈ ಅವಘಡದಲ್ಲಿ ಆನೆಗಳ ಯಾವುದೇ ತಪ್ಪಿಲ್ಲ, ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವೇ ಶೌರ್ಯ ಸಾವಿಗೆ ನೇರ ಕಾರಣ ಎಂದರು. ಇತ್ತೀಚೆಗೆ ನಡೆದ ದಸರಾ ಅಂಬಾರಿ ಅವಘಡ ಮತ್ತು ಶೌರ್ಯನ ಸಾವು ಇಲಾಖೆಯ ವೈಫಲ್ಯವನ್ನು ಬಿಚ್ಚಿಟ್ಟಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರವಿಪ್ರಸಾದ್ ಎಂ. ಅವರು ಅರಣ್ಯ ಇಲಾಖೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. "ತಪ್ಪು ಮಾಡಿದ ಅಧಿಕಾರಿಗಳನ್ನು ರಕ್ಷಿಸಲು ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ಬರೀ ಪ್ರಾಯಶ್ಚಿತ್ತ ಹೋಮಗಳನ್ನು ಮಾಡಿಸುವುದರಿಂದ ಮಾಡಿದ ತಪ್ಪು ಸರಿಯಾಗುವುದಿಲ್ಲ. ಈ ಘಟನೆಯ ಸತ್ಯಾಸತ್ಯತೆ ಹೊರಬರಲು ನಿವೃತ್ತ ಅಥವಾ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸರ್ಕಾರ ತಕ್ಷಣವೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು" ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ಹಾಗೂ ವನ್ಯಜೀವಿ ಸಚಿವರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಒಂದು ವೇಳೆ ಶೌರ್ಯ ಸಾವಿಗೆ ಸೂಕ್ತ ನ್ಯಾಯ ಸಿಗದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಕರವೇ ಸಿಂಹಸೇನೆ ಎಚ್ಚರಿಕೆ ನೀಡಿದೆ.

Edited By :
PublicNext

PublicNext

05/11/2026 01:48 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ