ಬೆಂಗಳೂರು : ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜೆ.ಪಿ. ನಗರ 4ನೇ ಹಂತದ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು, ಪಾದಚಾರಿ ಮಾರ್ಗ ಹಾಗೂ ವೈಷ್ಣವಿ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಹಾದುಹೋಗುವ ಮಳೆನೀರು ಕಾಲುವೆ (SWD) ಪ್ರದೇಶಗಳಿಗೆ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಗ್ರೇಟರ್ ಬೆಂಗಳೂರು ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ನೀಡಿದ್ದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಸಂಬಂಧ, ಜೆ.ಪಿ. ನಗರದ 4ನೇ ಹಂತದ ಮೆಟ್ರೋ ನಿಲ್ದಾಣದಿಂದ ಹೊರಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತರಿಸಿ ಸುಸ್ಥಿತಿಯಲ್ಲಿಡುವಂತೆ ಸೂಚಿಸಿದರು.
ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಸರ್ವಿಸ್ ರಸ್ತೆಯ ಕಡೆಗೆ ವಿಭಜಕ ಅಳವಡಿಸಿ, ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ವ್ಯವಸ್ಥಿತ ನಿಲುಗಡೆಗೆ ಸ್ಥಳ ನಿಗದಿಪಡಿಸುವಂತೆ ಬಿಎಂಆರ್‌ಸಿಎಲ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶನ ನೀಡಿದರು.
ಬನ್ನೇರುಘಟ್ಟ ರಸ್ತೆಯ ರಾಯಲ್ ಓಕ್ ಶೋರೂಮ್ ಪಕ್ಕದ ರಸ್ತೆಯ ಮಾರ್ಗದಲ್ಲಿ ಬರುವ ರಾಜಕಾಲುವೆ ಸೇತುವೆಗೆ ಅನಧಿಕೃತವಾಗಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಿ, ಇಳಿಜಾರು ನಿರ್ಮಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂದುವರಿದು, ಕಟ್ಟೆ ಮುನೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಖಾಲಿ ಪ್ರದೇಶದಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸುವಂತೆಯೂ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಮಾಲತಿ, ಕಾರ್ಯನಿರ್ವಾಹಕ ಅಭಿಯಂತರರಾದ (EE) ರವಿ, ಹರಿಪ್ರಸಾದ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
05/11/2026 03:33 pm