ಬೆಂಗಳೂರು: ದೇಶಾದ್ಯಂತ ಬುಲೆಟ್ ರೈಲುಗಳ ಕಾರಿಡಾರ್‌ಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 7 ಮಾರ್ಗಗಳಲ್ಲಿ ರೈಲು ಓಡಿಸಲು ನಿರ್ಧರಿಸಿದ್ದು, ಈ ಪೈಕಿ ದಕ್ಷಿಣ ಭಾರತದ ಏಕೈಕ ಮಾರ್ಗವೂ ಒಂದಾಗಿದೆ. ಕರ್ನಾಟಕದ ಮೈಸೂರಿನಿಂದ ತಮಿಳುನಾಡಿನ ಚೆನ್ನೈ ನಡುವೆ ಬುಲೆಟ್ ರೈಲಿಗೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಲಾಗುತ್ತಿದೆ.
ಈಗಾಗಲೇ ಮುಂಬೈ - ಅಹಮದಾಬಾದ್ ಹೈ - ಸ್ಪೀಡ್ ರೈಲು ಯೋಜನೆಯ ಕಾಮಗಾರಿ ಭಾಗಶಃ ಮುಕ್ತಾಯವಾಗಿದೆ. ಇದು ಭಾರತದ ಮೊದಲ ಬುಲೆಟ್ ರೈಲು ಮಾರ್ಗವಾಗಿದೆ. ಇದನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಜಪಾನ್ ಸರ್ಕಾರದ ಸಹಾಯದಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಡಿಸೆಂಬರ್ 2027ರ ವೇಳೆಗೆ ಗುಜರಾತ್ ಮಾರ್ಗವನ್ನು ಮತ್ತು ಡಿಸೆಂಬರ್ 2029 ರ ವೇಳೆಗೆ ಮಹಾರಾಷ್ಟ್ರ ಸೇರಿ ಸಂಪೂರ್ಣ ಮಾರ್ಗವನ್ನು ಪೂರ್ಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, 2030ರ ವೇಳೆಗೆ ದೇಶದಲ್ಲಿ ಬುಲೆಟ್ ರೈಲು ಓಡಲಿದೆ ಎಂದು ನಿರೀಕ್ಷಿಸಲಾಗಿದೆ.
ಮೈಸೂರು ಮತ್ತು ಚೆನ್ನೈ ಬುಲೆಟ್ ರೈಲಿನ ಮಾರ್ಗವು ಕೇಂದ್ರ ಸರ್ಕಾರ ತನ್ನ ಚೆಕ್‌ಲಿಸ್ಟ್‌ನಲ್ಲಿ ಇಟ್ಟುಕೊಂಡಿರುವ ದಕ್ಷಿಣ ಭಾರತದ ಏಕೈಕ ಬುಲೆಟ್ ರೈಲು ಮಾರ್ಗ ಇದಾಗಿದೆ. ಮೈಸೂರಿನಿಂದ ಶುರುವಾಗಿ ಬೆಂಗಳೂರನ್ನು ಹಾದು ಚೆನ್ನೈ ಅನ್ನು ವೇಗವಾಗಿ ಸಂಪರ್ಕಿಸುವ ಈ ಮಾರ್ಗ ದೇಶದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುತ್ತದೆ. 2013ರಲ್ಲಿಯೇ ಈ ಬಗ್ಗೆ ಪ್ರಸ್ತಾಪ ಆಗಿತ್ತು. ನಂತರ 2015ರಲ್ಲಿ ಚೀನಾ ಮತ್ತು 2018ರಲ್ಲಿ ಜರ್ಮನಿ ಸರ್ಕಾರದ ಸಹಯೋಗದೊಂದಿಗೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಪ್ರಯತ್ನಗಳನ್ನು ನಡೆದಿದ್ದವು. ಅದಾದ ಬಳಿಕ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ಈ ಕಾರಿಡಾರ್ ಉಲ್ಲೇಖವಾಗಿದೆ. ಇದರ ಡಿಪಿಆರ್ ಕಾರ್ಯವನ್ನು ಈಗ ಕೇಂದ್ರ ಸರ್ಕಾರ ಶುರು ಮಾಡಿದೆ. ಡಿಪಿಆರ್ ಬಳಿಕ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.
ರಾಷ್ಟ್ರೀಯ ರೈಲು ಯೋಜನೆಯ ಪ್ರಕಾರ, ದಿಲ್ಲಿ - ವಾರಣಾಸಿ, ದಿಲ್ಲಿ - ಅಹಮದಾಬಾದ್, ಮುಂಬೈ - ನಾಗ್ಪುರ, ಮುಂಬೈ - ಹೈದರಾಬಾದ್, ಚೆನ್ನೈ - ಮೈಸೂರು, ದಿಲ್ಲಿ - ಅಮೃತಸರ, ವಾರಣಾಸಿ - ಹೌರಾ ಮಾರ್ಗಗಳನ್ನು ಗುರುತಿಸಲಾಗಿದೆ. ಈ ಮಾರ್ಗಗಳಲ್ಲಿ ಬುಲೆಟ್ ರೈಲುಗಳನ್ನು ಓಡಿಸುವುದರಿಂದ ಏನೆಲ್ಲಾ ಆಗುತ್ತದೆ? ಬೇಡಿಕೆ ಇದೆಯಾ? ವೆಚ್ಚ ಎಷ್ಟು? ಪ್ರಯೋಜನಗಳೆಷ್ಟು? ಎಂಬುದನ್ನು ಅರ್ಥೈಸಿಕೊಳ್ಳಲು ಈ ಕಾರಿಡಾರ್‌ಗಳನ್ನು ಅಧ್ಯಯನ ಮಾಡಲಾಗುತ್ತಿದೆ.
313 ಹಳ್ಳಿಗಳಲ್ಲಿ ಸುಮಾರು 1,162 ಹೆಕ್ಟೇರ್ ಭೂಮಿ ಸ್ವಾಧೀನ ಅವಶ್ಯಕ
ಒಟ್ಟು ಉದ್ದ 435 ಕಿಲೋ ಮೀಟರ್. ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದುಹೋಗಲಿದೆ. ಈ ಮಾರ್ಗದಲ್ಲಿ ಒಟ್ಟು 9 ಹೊಸ, ಅತ್ಯಾಧುನಿಕ ರೈಲ್ವೇ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ. ಕರ್ನಾಟಕದಲ್ಲಿ ಐದು, ಆಂಧ್ರ ಪ್ರದೇಶದಲ್ಲಿ ಒಂದು ತಮಿಳುನಾಡಿನಲ್ಲಿ ಮೂರು ಕಡೆ ಸ್ಟಾಪ್ ಇದೆ. ಅಂದ್ರೇ ಸ್ಟಾರ್ಟ್ ಹಾಗೂ ಎಂಡ್ ಪಾಯಿಂಟ್ ಬಿಟ್ಟರೆ ಒಟ್ಟು 7 ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ. ಇದಕ್ಕಾಗಿ 313 ಹಳ್ಳಿಗಳಲ್ಲಿ ಸುಮಾರು 1,162 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅವಶ್ಯಕತೆ ಇದೆ.
ಮೈಸೂರು - ಚೆನ್ನೈ ಬುಲೆಟ್ ರೈಲು ಮಾರ್ಗದ ನಿಲ್ದಾಣಗಳು ಯಾವುವು?
ಮೈಸೂರು
ಮಂಡ್ಯ
ಚನ್ನಪಟ್ಟಣ
ಬೆಂಗಳೂರು (ಬೈಯ್ಯಪ್ಪನಹಳ್ಳಿ)
ಬಂಗಾರಪೇಟೆ
ಚಿತ್ತೂರು
ಅರಕ್ಕೋಣಂ
ಪೂನಮಲ್ಲೀ
ಚೆನ್ನೈ (ಕೇಂದ್ರ ನಿಲ್ದಾಣ)
ಚೆನ್ನೈ ಬೆಂಗಳೂರು ನಡುವೆ ಪ್ರಯಾಣ 90 ನಿಮಿಷ
ಈ ಬುಲೆಟ್ ಟ್ರೈನ್ ಗಂಟೆಗೆ ಗರಿಷ್ಠ 350 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಕಾರ್ಯಾಚರಣೆಯ ವೇಗ ಗಂಟೆಗೆ 320 ಕಿಲೋ ಮೀಟರ್ ಆಗಿದ್ದು, ಸರಾಸರಿ ಗಂಟೆಗೆ 250 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ನಿರೀಕ್ಷೆ ಇದೆ. ಇದರರ್ಥ, ಇವತ್ತು ಬೆಂಗಳೂರಿನಿಂದ ಚೆನ್ನೈಗೆ ತಲುಪಲು ಸುಮಾರು 5 - 6 ಗಂಟೆ ಬೇಕಾಗುತ್ತಿದೆ. ಬುಲೆಟ್ ಟ್ರೈನ್ ಬಂದ ಮೇಲೆ ಅದು ಕೇವಲ 90 ನಿಮಿಷಕ್ಕೆ ಇಳಿಯಲಿದೆ.
ಬೆಂಗಳೂರಿನಿಂದ ಮೈಸೂರಿಗೆ ಕೇವಲ 45 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಸಾಂಸ್ಕೃತಿಕ ನಗರಿ ಮೈಸೂರಿನಿಂದ ಚೆನ್ನೈನ ಸಂಪೂರ್ಣ ಪ್ರಯಾಣ ಕೇವಲ 2 ಗಂಟೆ 25 ನಿಮಿಷಗಳಲ್ಲಿ ಮುಗಿದುಹೋಗಲಿದೆ. ಇನ್ನು ಪ್ರಯಾಣದ ದರದ ಬಗ್ಗೆ ಹೇಳುವುದಾದರೆ, ಸದ್ಯದ ಅಂದಾಜಿನ ಪ್ರಕಾರ, ಸಾಮಾನ್ಯ ರೈಲುಗಳ ಪ್ರಥಮ ದರ್ಜೆ ಎಸಿ ದರಕ್ಕಿಂತ 1.5 ಪಟ್ಟು ಹೆಚ್ಚಿರಬಹುದು ಎಂದು ನಿರೀಕ್ಷಿಸಲಾಗಿದೆ. ಒಂದು ರೈಲಿನಲ್ಲಿ ಸುಮಾರು 750 ಪ್ರಯಾಣಿಕರು ಒಟ್ಟಿಗೆ ಪ್ರಯಾಣಿಸಬಹುದಾಗಿದೆ. ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಗಳು ಮತ್ತು ಆರಾಮದಾಯಕ ಪ್ರಯಾಣಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಇದರಲ್ಲಿ ಇರಲಿವೆ. ಈ ಮಾರ್ಗವು ಬಹುತೇಕ ಎಲಿವೇಟೆಡ್ ಕಾರಿಡಾರ್ ಆಗಿರಲಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಪಕ್ಕದಲ್ಲೇ ಈ ಮಾರ್ಗವನ್ನು ನಿರ್ಮಿಸಲು ಯೋಜಿಸಲಾಗಿದೆ. ನಗರ ಪ್ರದೇಶಗಳಲ್ಲಿ ಭೂಮಿಯ ಕೊರತೆ ಇರುವುದರಿಂದ, ಸುಮಾರು 30 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 14 ಕಿಲೋಮೀಟರ್ ಮತ್ತು ಚೆನ್ನೈನಲ್ಲಿ 2.5 ಕಿಲೋಮೀಟರ್ ಸುರಂಗ ಮಾರ್ಗ ಇರಲಿದೆ.
ಬುಲೆಟ್ ರೈಲು ಪ್ರಯೋಜನಗಳೇನು?
ಮೈಸೂರು - ಚೆನ್ನೈ ನಡುವಿನ ಬುಲೆಟ್ ರೈಲು ಮಾರ್ಗದ ಯೋಜನೆ ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.
ದಕ್ಷಿಣ ಭಾರತದ ಆರ್ಥಿಕತೆಗೆ ಹೊಸ ಶಕ್ತಿಯನ್ನು ತುಂಬಲಿದೆ.
ಬೆಂಗಳೂರು ಮತ್ತು ಚೆನ್ನೈನಂತಹ ಕೈಗಾರಿಕಾ ಮತ್ತು ತಂತ್ರಜ್ಞಾನ ಕೇಂದ್ರಗಳ ನಡುವೆ ವೇಗದ ಸಂಪರ್ಕ ಏರ್ಪಡುವುದರಿಂದ ವ್ಯಾಪಾರ, ವಹಿವಾಟು, ಮತ್ತು ಹೂಡಿಕೆಗಳು ಹೆಚ್ಚಾಗಲಿವೆ.
ಯೋಜನೆಯ ನಿರ್ಮಾಣ ಹಂತದಲ್ಲಿ ಮತ್ತು ನಂತರದ ಕಾರ್ಯಾಚರಣೆ ಹಂತದಲ್ಲಿ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಮೈಸೂರಿನ ಅರಮನೆ, ಚನ್ನಪಟ್ಟಣದ ಬೊಂಬೆಗಳು, ಬೆಂಗಳೂರಿನ ಆಧುನಿಕತೆ ಮತ್ತು ಚೆನ್ನೈನ ಕಡಲತೀರಗಳನ್ನು ಬೆಸೆಯುವ ಈ ಮಾರ್ಗವು ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನವನ್ನು ನೀಡಲಿದೆ.
ಕಾರಿಡಾರ್ ಹಾದುಹೋಗುವ ಮಂಡ್ಯ, ಚನ್ನಪಟ್ಟಣ, ಬಂಗಾರಪೇಟೆಯಂತಹ ಪಟ್ಟಣಗಳಲ್ಲಿ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೆ ವೇಗ ಸಿಗಲಿದೆ.
PublicNext
26/07/2025 09:01 pm