ಪಾಟ್ನಾ: ವಿದ್ಯುತ್ ಸೇರಿದಂತೆ ಹಲವು ಉಚಿತ ಭರವಸೆ ನೀಡಿರುವ ಬಿಹಾರದ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಚುನಾವಣೆಗೆ ಮುನ್ನ ಮತ್ತೊಂದು ಬಂಪರ್ ಕೊಡುಗೆ ಘೋಷಣೆ ಮಾಡಿದೆ. ಬಿಸಿಯೂಟ ತಯಾರಕರು, ರಾತ್ರಿ ಕಾವಲುಗಾರರು ಹಾಗೂ ಗೌರವ ಧನವನ್ನ ಹೆಚ್ಚಳ ಮಾಡಿದೆ. ಈ ಕುರಿತು ತಮ್ಮ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.
ನಿತೀಶ್ ಕುಮಾರ್ ಹೇಳಿದ್ದೇನು..?
"2005ರಲ್ಲಿ ನಮ್ಮ ಸರ್ಕಾರ ಬಂದಾಗ ಶಿಕ್ಷಣಕ್ಕೆ ಮೀಸಲಾದ ಬಜೆಟ್ ₹4,366 ಕೋಟಿ ರೂಪಾಯಿಗಳಿತ್ತು. ಈಗ ಅದು ₹77,690 ಕೋಟಿ ರೂಪಾಯಿಗಳಾಗಿದ್ದು, ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯಗಳ ಬೆಳವಣಿಗೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಅಡುಗೆ ಸಿಬ್ಬಂದಿ, ಕಾವಲುಗಾರರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಶಿಕ್ಷಣ ವ್ಯವಸ್ಥೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಗೌರವಧನವನ್ನು ದ್ವಿಗುಣಗೊಳಿಸಿ, ಅವರಿಗೆ ಗೌರವವನ್ನೂ ಜತೆಗೆ ಪ್ರೋತ್ಸಾಹವನ್ನೂ ನೀಡಲಾಗಿದೆ ಎಂದು ನಿತೀಶ್ ತಿಳಿಸಿದ್ದಾರೆ.
ಗೌರವಧನದ ವಿವರ:
ಬಿಸಿಯೂಟ ತಯಾರಕರು: ₹1,650 → ₹3,300
ರಾತ್ರಿ ಕಾವಲುಗಾರರು (ಮಾಧ್ಯಮಿಕ/ಉನ್ನತ ಶಾಲೆಗಳು): ₹5,000 → ₹10,000
ದೈಹಿಕ ಶಿಕ್ಷಣ ಮತ್ತು ಆರೋಗ್ಯ ಬೋಧಕರು: ₹8,000 → ₹16,000
ವಾರ್ಷಿಕ ವೇತನ ಹೆಚ್ಚಳ: ₹200 → ₹400
ಈ ಕ್ರಮದಿಂದ ಕಾರ್ಯನಿರತ ಸಿಬ್ಬಂದಿಗೆ ಆರ್ಥಿಕ ಬಲ ದೊರೆಯುವುದು ಜೊತೆಗೆ ಕಾರ್ಯೋತ್ಸಾಹವೂ ಹೆಚ್ಚಲಿದೆ ಎಂದು ನಿತೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
01/08/2025 11:28 am