ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ರಸ್ತೆ ಬದಿಯಲ್ಲೇ ವಾಸ, ಕ್ರಮ ಕೈಗೊಳ್ಳದ ಜಿಲ್ಲಾಡಳಿತ, ಸರ್ಕಾರಿ ಸೂಚನೆಗಳಿಗೆ ಡೋಂಟ್ ಕೇರ್...

ನಂಜನಗೂಡು: 80 ವರ್ಷಗಳಿಂದ ಖರಾಬು ಜಮೀನಿನಲ್ಲಿ ವಾಸವಿದ್ದ ಕುಟುಂಬಗಳನ್ನ 5 ತಿಂಗಳ ಹಿಂದೆ ಬೀದಿಪಾಲು ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಸೂಚನೆ ಬಂದರೂ ಮೈಸೂರು ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲ್ಲೂಕು ಆಡಳಿತ ಕ್ಯಾರೆ ಎನ್ನದೆ ಜಾಣ ಕುರುಡರಂತೆ ವರ್ತಿಸಿರುವ ಅಚ್ಚರಿ ಅಂಶ ಬೆಳಕಿಗೆ ಬಂದಿದೆ. ಬೀದಿಪಾಲಾದ ಕುಟುಂಬಗಳಿಗೆ ನ್ಯಾಯ ಒದಗಿಸದ ಜಿಲ್ಲಾಡಳಿತದ ಬಗ್ಗೆ ಸಂತ್ರಸ್ತ ಕುಟುಂಬಗಳು ಹಿಡಿಶಾಪ ಹಾಕುತ್ತಿವೆ. ತೋರಿಕೆಗಾಗಿ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಕೇವಲ ಸಾಂತ್ವನ ಹೇಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

ನಂಜನಗೂಡು ತಾಲ್ಲೂಕು ಹೊರಳವಾಡಿ ಹೊಸೂರು ಗ್ರಾಮದ ಖರಾಬು ಜಾಗದಲ್ಲಿ 85 ವರ್ಷಗಳಿಂದ ಹಂದಿಜೋಗಿ ಸಮುದಾಯದ ಅಕ್ಷತಾ ಎಂಬುವರ ಕುಟುಂಬ ಮೂರು ತಲೆಮಾರುಗಳಿಂದ ವಾಸವಿತ್ತು. 5 ತಿಂಗಳ ಹಿಂದೆ ಶಿವಾನಂದ, ಕುಮಾರ ಹಾಗೂ ಕೆಂಪಮ್ಮಣ್ಣಿ ಎಂಬುವರು ಇದು ನಮ್ಮ ಜಮೀನೆಂದು ತಿಳಿಸಿ ಮನೆಗಳನ್ನ ಧ್ವಂಸಗೊಳಿಸಿ ಕುಟುಂಬಗಳನ್ನ ಬೀದಿಪಾಲು ಮಾಡಿದ್ದರು. ಈ ವೇಳೆ ಎರಡು ಕುಟುಂಬಗಳು ಸಮೀಪದ ರಸ್ತೆ ಬದಿಯಲ್ಲಿ ತಾತ್ಕಾಲಿಕ ಶೆಡ್ ಗಳನ್ನ ನಿರ್ಮಿಸಿಕೊಂಡಿದ್ದಾರೆ.

ತಮಗಾದ ಅನ್ಯಾಯವನ್ನ ಸರ್ಕಾರದ ಗಮನಕ್ಕೆ ತಂದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕಳೆದ 5 ತಿಂಗಳಿಂದ ಯಾವುದೇ ರಕ್ಷಣೆ ಇಲ್ಲದ ಶೆಡ್ ನಲ್ಲಿ ವಾಸವಿದ್ದಾರೆ. ಸಂತ್ರಸ್ತರ ಮನವಿಗೆ ಸ್ಪಂದಿಸಿರುವ ಸಮಾಜ ಕಲ್ಯಾಣ ಇಲಾಖೆ, ಪ್ರಾದೇಶಿಕ ಆಯುಕ್ತರು ಹಾಗೂ ಮುಖ್ಯಮಂತ್ರಿಗಳ ಕಾರ್ಯಾಲಯ ಜಿಲ್ಲಾಡಳಿತಕ್ಕೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದೆ. ಆದ್ರೆ ಜಿಲ್ಲಾಡಳಿತವಾಗಲಿ ತಾಲ್ಲೂಕು ಆಡಳಿತವಾಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದೆ. ಮೂರು ತಲೆಮಾರುಗಳಿಂದ ವಾಸ ಮಾಡುತ್ತಿದ್ದ ಹಂದಿಜೋಗಿ ಕುಟುಂಬಗಳಿಗೆ ನ್ಯಾಯ ಒದಗಿಸಬೇಕಿದೆ.

ಸಿಎಂ ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ನಂಜನಗೂಡು

Edited By :
PublicNext

PublicNext

06/09/2025 09:49 am

Cinque Terre

20.49 K

Cinque Terre

0

ಸಂಬಂಧಿತ ಸುದ್ದಿ