ಇಸ್ರೇಲ್: ಕತಾರ್ ರಾಜಧಾನಿ ದೋಹಾದ ಮೇಲೆ ಇಸ್ರೇಲ್ ನಡೆಸಿದ ದಾಳಿ ಇಡೀ ಮಧ್ಯಪ್ರಾಚ್ಯಕ್ಕೆ ದೊಡ್ಡ ಸಂದೇಶ ಎಂದು ಇಸ್ರೇಲ್ ಸಂಸತ್ (ಕ್ನೆಸೆಟ್) ಸ್ಪೀಕರ್ ಅಮೀರ್ ಒಹಾನಾ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಒಹಾನಾ, ದೋಹಾದಲ್ಲಿ ನಡೆದ ಸ್ಫೋಟದ ವೀಡಿಯೊವನ್ನು ಅಪ್‌ಲೋಡ್ ಮಾಡಿ – “ಇದು ಇಡೀ ಮಧ್ಯಪ್ರಾಚ್ಯಕ್ಕೆ ಸಂದೇಶ” ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ, ಜುಲೈ 20 ರಂದು ಹೌತಿಗಳ ವಿರುದ್ಧ ಇಸ್ರೇಲ್ ಪ್ರತಿಕ್ರಿಯೆಯಾಗಿ ಯೆಮೆನ್‌ನ ಅಲ್-ಹುದೈದಾ ಬಂದರಿನ ಮೇಲೆ ಐಡಿಎಫ್ (Israel Defense Forces) ದಾಳಿ ನಡೆಸಿತ್ತು. ಆ ದಾಳಿಯ ವೀಡಿಯೊವನ್ನೂ ಒಹಾನಾ ಇದೇ ಸಂದೇಶದೊಂದಿಗೆ ಹಂಚಿಕೊಂಡಿದ್ದರು.
ಕತಾರ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ಮಿಲಿಟರಿ ದಾಳಿಯನ್ನು ಶ್ಲಾಘಿಸಿ – “ಭಯೋತ್ಪಾದಕರು ಜಗತ್ತಿನ ಯಾವುದೇ ಭಾಗದಲ್ಲಿ ಆಡಗಿದ್ರೂ ಇಸ್ರೇಲ್ ಹುಡುಕಿ ಹೊಡೆದು ಬೀಳಿಸುತ್ತದೆ” ಎಂದು ಹೇಳಿದ್ದಾರೆ. ಜೊತೆಗೆ ಐಡಿಎಫ್‌ನ ನಿರ್ಧಾರ ಮತ್ತು ದಂಡನೆ ಶಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿಯೂ ಈ ದಾಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಸ್ವೀಕರಿಸಿ – “ಇಸ್ರೇಲ್ ಇದನ್ನು ಪ್ರಾರಂಭಿಸಿದೆ, ಇಸ್ರೇಲ್ ನಡೆಸಿದೆ ಮತ್ತು ಇದಕ್ಕೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತದೆ” ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕತಾರ್, ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದನ್ನು ಹಮಾಸ್‌ನ ರಾಜಕೀಯ ಪ್ರಧಾನ ಕಚೇರಿಯ ಮೇಲಿನ ಹೇಡಿತನದ ದಾಳಿ ಎಂದು ಕರೆದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ, “ಇದು ಅಂತರರಾಷ್ಟ್ರೀಯ ಕಾನೂನುಗಳು ಹಾಗೂ ಮಾನದಂಡಗಳ ಸ್ಪಷ್ಟ ಉಲ್ಲಂಘನೆ” ಎಂದು ಕಿಡಿಕಾರಿದ್ದಾರೆ.
PublicNext
10/09/2025 07:33 pm