ಸ್ಯಾಂಡಲ್‌ವುಡ್‌ನ ಮಾಸ್ ನಟ ಧ್ರುವ ಸರ್ಜಾ ಅವರಿಗೆ ವಂಚನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಹೌದು. ಚಲನಚಿತ್ರ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಅವರು ಧ್ರುವ ಸರ್ಜಾ ವಿರುದ್ಧ 9 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸದಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಮುಂಬೈ ಪೊಲೀಸರಿಗೆ ಆದೇಶಿಸಿದೆ.
ನ್ಯಾಯಾಲಯದ ಅನುಮತಿ ಇಲ್ಲದೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವುದನ್ನು ಮುಂದುವರಿಸದಂತೆ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರ ವಿಭಾಗೀಯ ಪೀಠ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ಏನಿದು ಪ್ರಕರಣ?
ಧ್ರುವ ಸರ್ಜಾ ಹಾಗೂ ರಾಘವೇಂದ್ರ ಹೆಗ್ಡೆ 2016ರಿಂದ 2018ರವರೆಗೆ ಜೊತೆಗೆ ಕೆಲಸ ಮಾಡಿದ್ದರು. ಧ್ರುವ ಸರ್ಜಾ ಅವರೇ ರಾಘವೇಂದ್ರ ಹೆಗ್ಡೆ ಭೇಟಿ ಮಾಡಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಸೋಲ್ಜರ್ ಎಂಬ ಸಿನಿಮಾ ಮಾಡುವುದಾಗಿ ಧ್ರುವ ಸರ್ಜಾ ಸ್ಕ್ರಿಪ್ಟ್ ಮಾಡಿದ್ದರು. ಆದರೆ ಧ್ರುವ ಸರ್ಜಾ ಒಪಂದಕ್ಕೆ ಸಹಿ ಹಾಕುವ ಮೊದಲೇ 3.15 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ರಾಘವೇಂದ್ರ ಹೆಗ್ಗಡೆ ಆರೋಪಿಸಿದ್ದರು.
ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿಗೆ 3.15 ಕೋಟಿ ಸಾಲ ಪಡೆದು, ಧ್ರುವ ಒಡೆತನದ ಆರ್‌ಹೆಚ್ ಎಂಟರ್ಟೈನ್ಮೆಂಟ್‌ಗೆ ಹಣ ವರ್ಗಾವಣೆ ಮಾಡಿದ್ದರು. ಹಣ ಪಡೆದು ಅಪಾರ್ಟ್ಮೆಂಟ್ ಖರೀದಿ ಮಾಡಿರುವ ಧ್ರುವ ಸರ್ಜಾ, ಸಿನಿಮಾ ಮಾಡಿಕೊಡುವ ಭರವಸೆ ನೀಡಿದ್ದರು. 2019 ಫೆಬ್ರವರಿ 21ರಂದು ಒಪ್ಪಂದ ಆಗಿತ್ತು. ಆದರೆ ಈ ಹಣದ ವ್ಯವಹಾರವು ಒಪ್ಪಂದ ಮಾಡಿಕೊಳ್ಳುವ ಮುನ್ನವೇ ನಡೆದಿತ್ತು ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
PublicNext
10/09/2025 07:49 pm