ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಅವರಿಗೆ ಬಂಧನದ ಭೀತಿ ಎದುರಾದ ಹಿನ್ನೆಲೆ ಇದೀಗ ಶಾಸಕ ಬೈರತಿ ಬಸವರಾಜ್ ಅವರು ತಲೆಮರೆಸಿಕೊಂಡಿದ್ದಾರೆಂದು ಹೇಳಲಾಗುತ್ತೆ. ಮತ್ತೊಂದೆಡೆ ಸಿಐಡಿ ಆರೋಪಿ ಶಾಸಕನ ಹಿಂದೆ ಬಿದ್ದಿದ್ದು, ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ರೌಡಿ ಶೀಟರ್ ಬಿಕ್ಲು ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಬೈರತಿ ಬಸವರಾಜ್ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದ ಪೂರ್ವ ನಿರೀಕ್ಷಣಾ ಜಾಮೀನು ಅರ್ಜಿ ನಿನ್ನೆಯಷ್ಟೇ ವಜಾಗೊಂಡಿತ್ತು. ಈ ಬೆನ್ನಲ್ಲೇ ಶಾಸಕ ಬೈರತಿ ಬಸವರಾಜ್ ಗೆ ಬಂಧನ ಗ್ಯಾರಂಟಿ ಎಂಬಂತಾಗಿತ್ತು. ಆದರೆ, ಇಂದು ಬೈರತಿ ಬಸವರಾಜ್ ಅವರನ್ನು ವಿಚಾರಣೆಗೊಳಪಡಿಸಲೆಂದು ಮುಂದಾದ ಪೊಲೀಸರಿಗೆ ಆರೋಪಿ ಬೈರತಿ ತಲೆಮರೆಸಿಕೊಂಡಿದ್ದಾರೆಂಬ ಸಂಗತಿ ತಿಳಿಯಿತು.
ಬಳಿಕ ಮೂರು ತಂಡಗಳನ್ನು ರಚಿಸಿದ ಸಿಐಡಿ ಅಧಿಕಾರಿಗಳು ತಲೆಮರೆಸಿಕೊಂಡ ಆರೋಪಿ ಶಾಸಕನ ಪತ್ತೆಗಾಗಿ ಶೋಧ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಇನ್ನು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬೈರತಿ ಬಸವರಾಜ್ ಹಾಜರಾಗಿದ್ದರು. ಆದರೆ, ಹತ್ತು ದಿನಗಳ ಅಧಿವೇಶನದಲ್ಲಿ ಕಳೆದ ವಾರ ಸಂಪೂರ್ಣ ಗೈರಾಗಿದ್ದರೆಂದು ಹೇಳಲಾಗುತ್ತೆ. 2024 ರಲ್ಲಿ ನಡೆದ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಹೆಸರು ಕೇಳಿ ಬಂದಿತ್ತು.
ಶಾಸಕರ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿತ್ತು. ಆಗಾಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ತೆರಳಿ ವಿಚಾರಣೆಗೂ ಹಾಜರಾಗುತ್ತಿದ್ದ ಶಾಸಕ ಬೈರತಿ ಬಸವರಾಜು ಇದೀಗ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಮೂಲಕ ತಲೆಮರೆಸಿಕೊಂಡಿದ್ದು ಪೊಲೀಸರಿಗೆ ಹೊಸ ಟೆನ್ಶನ್ ಶುರುವಾದಂತಾಗಿದೆ.
ಬಿಕ್ಲು ಶಿವು ಕೊಲೆ ಕೇಸ್ ನಲ್ಲಿ ಆರೋಪಿ ಶಾಸಕ ಬೈರತಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದ ಹೈಕೋರ್ಟ್ ಜಡ್ಜ್ ಸುನೀಲ್ ಯಾದವ್ ಅವರ ಪೀಠವು, ಟ್ರಯಲ್ ಕೋರ್ಟ್ ಗೆ ಹೋಗುವಂತೆ ಷರಾ ಬರೆಯುವ ಮೂಲಕ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಜೊತೆಗೆ ಈ ಕೊಲೆ ಕೇಸ್ ನಲ್ಲಿ "ಕೋಕಾ ಕಾಯ್ದೆ" ಯು ಅನ್ವಯಿಸುವುದಿಲ್ಲವೆಂದು ತನ್ನ ಆದೇಶದಲ್ಲಿ ತಿಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
PublicNext
20/12/2025 08:57 pm