ಮಂಗಳೂರು: ಕರಾವಳಿ ಮಾತ್ರವಲ್ಲ ರಾಜ್ಯಕ್ಕೇ ಹೊಸದಾಗಿ ಪರಿಚಿತಗೊಂಡಿರುವ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ಗೆ ಇದೇ ಪ್ರಥಮ ಬಾರಿಗೆ ಮಂಗಳೂರು ಸಾಕ್ಷಿಯಾಗುತ್ತಿದೆ. ಫಿನ್ ಸ್ವಿಮ್ಮಿಂಗ್ ಹೆಸರು ಕೇಳುವಾಗಲೇ ವಿಶಿಷ್ಟವೆನಿಸಿದೆ. ಈಜುಪಟುಗಳು ಕಾಲಿಗೆ ವಿಶಿಷ್ಟವಾದ ರೆಕ್ಕೆಯಂತಹ ಸಾಧನವನ್ನು ಕಟ್ಟಿಕೊಂಡು ಈಜುವ ಈ ಫಿನ್ ಸ್ವಿಮ್ಮಿಂಗ್‌ನ ಫುಲ್ ಡಿಟೈಲ್ ಇಲ್ಲಿದೆ.
ಡಿ.20ರಿಂದ 22ರವರೆಗೆ ಮೂರು ದಿನಗಳ ಕಾಲ ಐದನೇ ರಾಷ್ಟ್ರಮಟ್ಟದ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ನಗರದ ಎಮ್ಮೆಕೆರೆ ಈಜುಕೊಳದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಡರ್‌ವಾಟರ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಈ ಪಂದ್ಯಾಟವನ್ನು ಆಯೋಜಿಸುತ್ತಿದೆ. 25ಕ್ಕೂ ಅಧಿಕ ರಾಜ್ಯಗಳ ಸುಮಾರು 1,000 ಮಂದಿ ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.
ಸಾಮಾನ್ಯವಾಗಿ ಈಜುಗಾರರು ಯಾವುದೇ ಉಪಕರಣಗಳಿಲ್ಲದೆ ಈಜಿದರೆ ಫಿನ್ ಸ್ವಿಮ್ಮಿಂಗ್‌ನಲ್ಲಿ ಕಾಲುಗಳಿಗೆ ಉದ್ದದ ಫಿನ್‌ಗಳನ್ನು ಅಳವಡಿಸಿ ಸ್ನಾರ್ಕೆಲಿಂಗ್ ಸ್ಕೂಬಾ ಡೈವಿಂಗ್ ಉಪಕರಣಗಳನ್ನು ಧರಿಸಿಕೊಂಡು ನೀರಿನೊಳಗೆ ಈಜುವುದೇ ಈ ಫಿನ್ ಸ್ವಿಮ್ಮಿಂಗ್‌ನ ವೈಶಿಷ್ಟ್ಯ. ಈ ಫಿನ್ ಸ್ವಿಮ್ಮಿಂಗ್‌ನಲ್ಲಿ ಮೋನೋ ಫಿನ್, ಬೈಫಿನ್ ಎಂಬ ವಿಧಗಳಿವೆ. ಬೈ ಫಿನ್ ಎಂದರೆ ಎರಡು ಕಾಲುಗಳಿಗೆ ಪ್ರತ್ಯೇಕವಾಗಿ ಎರಡು ರೆಕ್ಕೆ ಕಟ್ಟಿಕೊಂಡು ಈಜುವುದು. ಮೋನೋ ಎಂದರೆ ಎರಡು ಕಾಲುಗಳನ್ನು ಸೇರಿಸಿ ಒಂದೇ ರೆಕ್ಕೆಯನ್ನು ಕಟ್ಟಿಕೊಂಡು ಈಜುವುದು. ಮುಖಕ್ಕೆ ಸ್ನಾರ್ಕೆಲ್ ಎನ್ನುವ ಉಪಕರಣ ಕಟ್ಟಿಕೊಳ್ಳಲಾಗುತ್ತದೆ.
ಈ ಸ್ಪರ್ಧೆಯಲ್ಲಿ ಸ್ಪರ್ಧಾ ವಿಭಾಗಕ್ಕನುಗುಣವಾಗಿ 100 ಮೀ, 200, 400, 800 ಮೀ. ನೀರಿನ ಮೇಲೆ ಅಥವಾ ಒಳಗೆ ಈಜಲಾಗುತ್ತದೆ. 50 ಮೀಟರ್ ದೂರಕ್ಕೇ ಸೀಮಿತವಾಗಿ ಅಪ್ನಿಯಾ ಸ್ವಿಮ್ಮಿಂಗ್ ಎಂಬ ವಿಭಾಗದಲ್ಲೂ ಈಜಬಹುದು. ಈ ಈಜುವಿಕೆಗೆ ಕಡ್ಡಾಯವಾಗಿ ವೈದ್ಯರ ಪ್ರಮಾಣ ಪತ್ರ ಬೇಕಾಗುತ್ತದೆ. ವಿವಿಧ ವಯೋಮಾನಕ್ಕನುಗುಣವಾಗಿ ವಿಭಾಗಗಳನ್ನು ರಚಿಸಿಕೊಂಡು ಎಮ್ಮೆ ಕೆರೆ ಈಜುಕೊಳದಲ್ಲಿ ಅಂಡರ್‌ವಾಟರ್ ಫಿನ್ ಸ್ವಿಮ್ಮಿಂಗ್ ಸ್ಪರ್ಧಾಕೂಟ ನಡೆಯುತ್ತಿದೆ.
2023ರಲ್ಲಿ ಪಶ್ಚಿಮ ಬಂಗಾಳದ ಈಜುಗಾರ್ತಿ ಜೋಯಾ ಜನ್ನತ್ 25.71ಸೆಕೆಂಡ್‌ನಲ್ಲಿ ಫಿನ್ ಸ್ವಿಮ್ಮಿಂಗ್‌ನಲ್ಲಿ ಈಜಿ ದಾಖಲೆ ಬರೆದಿದ್ದಳು. ಈ ಪಂದ್ಯಾಟದಲ್ಲಿ ಬೆಂಗಳೂರಿನ ಮಾನ್ಯ ಎಂಬ ಬಾಲಕಿ 25.65ಸೆಕೆಂಡ್‌ನಲ್ಲಿ ಈಜಿ ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾಳೆ. ಒಟ್ಟಿನಲ್ಲಿ ಮಂಗಳೂರಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಫಿನ್ ಸ್ವಿಮ್ಮಿಂಗ್ ನಡೆಯುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಮಂಗಳೂರಿನ ಹೆಸರು ದಾಖಲಾಗಿದೆ.
PublicNext
21/12/2025 01:01 pm