ಬೆಳಗಾವಿ:ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಒಣಹವೆ ಮುಂದುವರೆಯಲಿದ್ದು, ಚಳಿ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಲವೆಡೆ ದಟ್ಟ ಮಂಜು ಆವರಿಸುವ ಸಾಧ್ಯತೆ ಇದ್ದು, ರಸ್ತೆ, ರೈಲು ಹಾಗೂ ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಂಭವವಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ವಿಜಯಪುರ, ಧಾರವಾಡದಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿ ದಾಖಲಾಗಿದೆ. ಬೀದರ್‌ನಲ್ಲಿ 6.7 ಡಿಗ್ರಿ ಸೆಲ್ಸಿಯಸ್ ಅತಿ ಕಡಿಮೆ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಚಳಿಯ ಪ್ರದೇಶವಾಗಿ ಹೊರಹೊಮ್ಮಿದೆ.
ಶೀತಗಾಳಿ ಎಚ್ಚರಿಕೆ ಡಿಸೆಂಬರ್ 24 ಮತ್ತು 25ರಂದು ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಶೀತಗಾಳಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ನೀಡಲಾಗಿದೆ. ಇತರ ಜಿಲ್ಲೆಗಳಲ್ಲೂ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿ ಉಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನ ಸಂಚಾರಕ್ಕೆ ಅಡಚಣೆ ರಾಜ್ಯದ ಹಲವೆಡೆ ಮುಂದಿನ ಒಂದು ವಾರ ದಟ್ಟ ಮಂಜು ಬೀಳುವ ಸಾಧ್ಯತೆ ಇರುವುದರಿಂದ ವಾಹನ ಚಾಲಕರು ಹೆಚ್ಚಿನ ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ. ಮಂಜಿನಿಂದ ದೃಶ್ಯಮಾನತೆ ಕಡಿಮೆಯಾಗುವ ಕಾರಣ ರಸ್ತೆ ಅಪಘಾತಗಳ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಬಸ್, ರೈಲು ಹಾಗೂ ವಿಮಾನ ಹಾರಾಟಕ್ಕೂ ವಿಳಂಬ ಸಂಭವಿಸಬಹುದು ಎಂದು ಸಿಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಜಿಲ್ಲಾವಾರು ಕನಿಷ್ಠ ತಾಪಮಾನ (°C) ಬೀದರ್ 6.7, ಬೆಳಗಾವಿ 7.9, ಧಾರವಾಡ 7.9, ಬಾಗಲಕೋಟೆ 8.5, ಕಲಬುರಗಿ 9.1, ವಿಜಯಪುರ 9.1, ಚಿಕ್ಕಬಳ್ಳಾಪುರ 9.5, ತುಮಕೂರು 9.5, ವಿಜಯನಗರ 9.5, ಹಾವೇರಿ 9.6, ಚಿಕ್ಕಮಗಳೂರು 9.7, ಹಾಸನ 9.7, ಕೊಡಗು 9.7, ಉತ್ತರ ಕನ್ನಡ 9.7, ಮೈಸೂರು 9.8, ರಾಯಚೂರು 9.8, ಕೊಪ್ಪಳ 9.9, ಶಿವಮೊಗ್ಗ 10, ಬೆಂಗಳೂರು ದಕ್ಷಿಣ 10.1, ಚಾಮರಾಜನಗರ 10.1, ಗದಗ 10.1, ಕೋಲಾರ 10.1, ಮಂಡ್ಯ 10.3, ದಾವಣಗೆರೆ 10.5, ಯಾದಗಿರಿ 10.5, ಬೆಂಗಳೂರು ಗ್ರಾಮಾಂತರ 10.7, ಬೆಂಗಳೂರು ನಗರ 10.8, ಚಿತ್ರದುರ್ಗ 11.3, ಬಳ್ಳಾರಿ 12.5, ಉಡುಪಿ 16.6, ದಕ್ಷಿಣ ಕನ್ನಡ 17.1.
ಹವಾಮಾನ ತಜ್ಞರ ಪ್ರಕಾರ, ಚಳಿ ಮತ್ತು ಮಂಜಿನ ಪರಿಣಾಮ ಇನ್ನೂ ಕೆಲ ದಿನಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
Kshetra Samachara
25/12/2025 09:25 am