ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಗಾಂಧಿ, ಅಂಬೇಡ್ಕರ್ ಫೋಟೋ ಕಡೆಗಣನೆ: ಭೀಮ್ ಆರ್ಮಿ ಆರೋಪ, ಆಡಿಯೋ ವೈರಲ್
ಬಳ್ಳಾರಿ: 77ನೇ ಗಣರಾಜ್ಯೋತ್ಸವ ಹಿನ್ನೆಲೆ ಬಿಜೆಪಿ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಸಂದರ್ಭದಲ್ಲಿ ಮಹಾತ್ಮಗಾಂಧೀಜಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಫೋಟೋಗೆ ಬಿಜೆಪಿ ಕಚೇರಿಯಲ್ಲಿ ಗೌರವ ಸಲ್ಲಿಸಿಲ್ಲ ಎಂದು ಭೀಮ್ ಆರ್ಮಿಯ ಸದಸ್ಯರು ಆರೋಪಿಸಿದ್ದಾರೆ.
ಬಳ್ಳಾರಿ ನಗರದ ವಾಜಪೇಯಿ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣದಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಧ್ವಜಾರೋಹಣ ನಂತರ ಬಿಜೆಪಿ ಪಕ್ಷ ಮತ್ತು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಅಂಬೇಡ್ಕರ್ ಫೋಟೋ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಕಡೆಗಣಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭೀಮ್ ಆರ್ಮಿ ಸಂಘಟನೆ ಮುಖಂಡ ರಘು ಎಂಬುವವರು ಬಿಜೆಪಿ ಪಕ್ಷದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
27/01/2026 03:32 pm