ಬಳ್ಳಾರಿ : ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ಜನವರಿ 2026ರ ತಡರಾತ್ರಿ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಜಿ–ಸ್ಕ್ವೇರ್ (G-Square) ಎಂಬ ಗೇಟೆಡ್ ಪ್ರಾಪರ್ಟಿ ಅಭಿವೃದ್ಧಿ ಯೋಜನೆಯ ಸೈಟ್ ಮ್ಯಾನೇಜರ್ ನೀಡಿರುವ ದೂರಿನಲ್ಲಿ ಆ ಆವರಣದಲ್ಲಿ ನಿರ್ಮಿಸಲಾದ ಮಾದರಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಮಾದರಿ ಮನೆ ಶ್ರೀಮತಿ ಅರುಣಾ ಜನಾರ್ದನ್ ರೆಡ್ಡಿ ಅವರದ್ದಾಗಿರುವುದಾಗಿಯೂ ಉಲ್ಲೇಖಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವಾ ದಳಕ್ಕೆ ಮಾಹಿತಿ ನೀಡಿದ್ದು ಅವರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ ಅಂತ ಎಸ್.ಪಿ ಸುಮನ್ ತಿಳಿಸಿದ್ದಾರೆ.
ಪೊಲೀಸರು ಪ್ರಾಥಮಿಕವಾಗಿ ತನಿಖೆಯನ್ನ ನಡೆಸಿದ್ದು. ಸ್ಥಳದಲ್ಲಿ ಸೋಕೋ ತಂಡದ ಮೂಲಕ ವೈಜ್ಞಾನಿಕ ಸಾಕ್ಷಿಗಳನ್ನ ಸಂಗ್ರಹಿಸಲಾಗಿರುತ್ತದೆ. ಅಪರಾಧ ಸ್ಥಳದಲ್ಲಿ ಲಭಿಸಿದ ವೈಜ್ಞಾನಿಕ ಸುಳಿಗಳ ಆಧಾರದ ಮೇಲೆ ಒಟ್ಟು ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ.
ಅದರಲ್ಲಿ ಆರು ಮಂದಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕರಾಗಿದ್ದಾರೆ.
ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿರುವಂತೆ, ಅಪ್ರಾಪ್ತರು ಮಾದರಿ ಮನೆಯ ಮೇಲ್ಛಾವಣಿಗೆ (ರೂಫ್‌ಟಾಪ್) ತೆರಳಿ ರೀಲ್ಸ್ ಚಿತ್ರೀಕರಣ ಹಾಗೂ ಫೋಟೋ/ವೀಡಿಯೊಗಳನ್ನು ತೆಗೆದುಕೊಳ್ಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದು ಪ್ರಾಥಮಿಕವಾಗಿ ಕಂಡುಬಂದಿರುತ್ತದೆ.
ತಮ್ಮ ಕೃತ್ಯದ ಗಂಭೀರತೆ ಮತ್ತು ಪರಿಣಾಮಗಳನ್ನು ಅರಿಯದೆ, ಗುಂಪಿನ ಇಬ್ಬರು ಸದಸ್ಯರು ಬೆಂಕಿ ಹಚ್ಚಿದ್ದು, ಅದು ನಂತರ ದೊಡ್ಡ ಮಟ್ಟದ ಅಗ್ನಿ ಅವಘಡಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ವಶಕ್ಕೆ ಪಡೆದ ಎಲ್ಲಾ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದ್ದು, ಅವರ ಹೇಳಿಕೆಗಳು ಈವರೆಗೆ ಸಂಗ್ರಹಿಸಿರುವ ಭೌತಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳಿಗೆ ಹೊಂದಿಕೆಯಾಗಿವೆ. ಪ್ರಕರಣದ ಮುಂದಿನ ತನಿಖೆ ಪ್ರಗತಿಯಲ್ಲಿದ್ದು, ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಅಂತ ಬಳ್ಳಾರಿ ಎಸ್.ಪಿ ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದಾರೆ.
PublicNext
25/01/2026 10:00 am