ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜಿತ್ ಪವಾರ್ ದುರಂತ ಸಾವು - ವಿಮಾನ ಅಪಘಾತಕ್ಕೆ ಬಲಿಯಾದ ಗಣ್ಯರ ಕರಾಳ ನೆನಪು!

ನವದೆಹಲಿ: ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಬೆಳಗ್ಗೆ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದ್ದಾರೆ. ಈ ದುರಂತದಲ್ಲಿ ಅವರೊಂದಿಗೆ ಇತರೆ ನಾಲ್ವರು ಸಹ ಪ್ರಾಣ ಕಳೆದುಕೊಂಡಿದ್ದಾರೆ. ಅಜಿತ್ ಪವಾರ್ ಅವರ ಅಕಾಲಿಕ ನಿಧನವು ದೇಶದಲ್ಲಿ ಈ ಹಿಂದೆ ವಿಮಾನ ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಅನೇಕ ಪ್ರಮುಖ ರಾಜಕೀಯ ಮುಖಂಡರು ಮತ್ತು ಗಣ್ಯರನ್ನು ನೆನಪಿಸಿದೆ.

ಎನ್‌ಸಿಪಿ ನಾಯಕರಾಗಿದ್ದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಪುಣೆಯ ಬಾರಾಮತಿ ಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ದುರಂತಕ್ಕೀಡಾಗಿದೆ. ಈ ಘಟನೆ ದೇಶದಾದ್ಯಂತ ಆಘಾತ ಮೂಡಿಸಿದ್ದು, ವಿಮಾನ ಅಪಘಾತಗಳಲ್ಲಿ ಜೀವ ಕಳೆದುಕೊಂಡ ಪ್ರಮುಖ ರಾಜಕಾರಣಿಗಳು ಮತ್ತು ಗಣ್ಯರ ಪಟ್ಟಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಹೋಮಿ ಬಾಬಾ (1966): ಭಾರತದ ಪರಮಾಣು ಕಾರ್ಯಕ್ರಮದ ಪಿತಾಮಹರೆಂದೇ ಖ್ಯಾತರಾಗಿದ್ದ ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು 1966ರ ಜನವರಿ 24ರಂದು ಏರ್ ಇಂಡಿಯಾ ಫ್ಲೈಟ್ 101 ಅಪಘಾತದಲ್ಲಿ ನಿಧನರಾದರು. ಸ್ವಿಟ್ಜರ್ಲೆಂಡ್‌ನ ಮಾಂಟ್ ಬ್ಲಾಂಕ್ ಪರ್ವತಕ್ಕೆ ವಿಮಾನ ಅಪ್ಪಳಿಸಿದ್ದು, ಜಿನೀವಾ ವಾಯು ಸಂಚಾರ ನಿಯಂತ್ರಣದೊಂದಿಗಿನ ತಪ್ಪು ಸಂವಹನವೇ ಕಾರಣವಾಗಿತ್ತು.

ಸಂಜಯ್ ಗಾಂಧಿ (1980): ಕಾಂಗ್ರೆಸ್ ನಾಯಕ ಹಾಗೂ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ ಅವರು 1980ರ ಜೂನ್ 23ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದ ಬಳಿ ವೈಮಾನಿಕ ಸಾಹಸ ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದಾಗ, ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿತ್ತು.

ಮಾಧವರಾವ್ ಸಿಂಧಿಯಾ (2001): ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟೆಂಬರ್ 30ರಂದು ಕಾನ್ಪುರದಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದರು. ರಾಜಕೀಯ ರ್ಯಾಲಿಗೆ ತೆರಳುತ್ತಿದ್ದಾಗ, ಉತ್ತರ ಪ್ರದೇಶದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಅವರ 10 ಆಸನಗಳ ಖಾಸಗಿ ವಿಮಾನ ಪತನಗೊಂಡಿತ್ತು.

ಜಿ.ಎಂ.ಸಿ. ಬಾಲಯೋಗಿ (2002): ಲೋಕಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ ನಾಯಕರಾಗಿದ್ದ ಜಿ.ಎಂ.ಸಿ. ಬಾಲಯೋಗಿ ಅವರು 2002ರ ಮಾರ್ಚ್ 3ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೈಕಲೂರು ಬಳಿ ತಮ್ಮ ಖಾಸಗಿ ಹೆಲಿಕಾಪ್ಟರ್ ಕೊಳಕ್ಕೆ ಅಪ್ಪಳಿಸಿ ನಿಧನರಾದರು.

ಸಿಪ್ರಿಯನ್ ಸಂಗ್ಮಾ (2004): ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ ಮತ್ತು ಇತರ ಒಂಬತ್ತು ಮಂದಿ, 2004ರ ಸೆಪ್ಟೆಂಬರ್ 22ರಂದು ಪವನ್ ಹನ್ಸ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಗುವಾಹಟಿಯಿಂದ ಶಿಲ್ಲಾಂಗ್‌ಗೆ ತೆರಳುತ್ತಿದ್ದಾಗ, ರಾಜ್ಯ ರಾಜಧಾನಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಬಾರಾಪಾನಿ ಸರೋವರದ ಬಳಿ ಹೆಲಿಕಾಪ್ಟರ್ ಪತನಗೊಂಡಿತ್ತು.

ಕೆ.ಎಸ್. ಸೌಂದರ್ಯ (2004): ಕನ್ನಡದ ಖ್ಯಾತ ನಟಿ ಹಾಗೂ ಬಿಜೆಪಿ ರಾಜಕಾರಣಿಯಾಗಿದ್ದ ಸೌಂದರ್ಯ ಅವರು 2004ರ ಏಪ್ರಿಲ್ 17ರಂದು ಬೆಂಗಳೂರು ಹೊರವಲಯದ ಯಲಹಂಕ ಬಳಿ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ತಮ್ಮ ಸಹೋದರ ಅರುಣ್ ಜೊತೆ ಬೆಂಗಳೂರಿನಿಂದ ಕರೀಂನಗರಕ್ಕೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿತ್ತು.

ಓ.ಪಿ. ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005): ಕೈಗಾರಿಕೋದ್ಯಮಿ ಹಾಗೂ ಹರಿಯಾಣ ಸಚಿವರಾಗಿದ್ದ ಓಂ ಪ್ರಕಾಶ್ ಜಿಂದಾಲ್ ಅವರು 2005ರಲ್ಲಿ ಕೃಷಿ ಸಚಿವ ಸುರೇಂದರ್ ಸಿಂಗ್ ಅವರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಅವರ ಹೆಲಿಕಾಪ್ಟರ್ ಪತನಗೊಂಡಿತ್ತು.

ವೈ.ಎಸ್. ರಾಜಶೇಖರ ರೆಡ್ಡಿ (2009): ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್‌ಆರ್ ಎಂದೇ ಜನಪ್ರಿಯರಾಗಿದ್ದರು) ಅವರು 2009ರ ಸೆಪ್ಟೆಂಬರ್ 2ರಂದು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟರು. ಪ್ರತಿಕೂಲ ಹವಾಮಾನದಿಂದಾಗಿ ಅವರ ಬೆಲ್ 430 ಹೆಲಿಕಾಪ್ಟರ್ ದಟ್ಟವಾದ ನಲ್ಲಮಲ ಕಾಡಿನಲ್ಲಿ ಪತನಗೊಂಡಿತ್ತು.

ದೋರ್ಜಿ ಖಂಡು (2011): ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರು, 2011ರ ಏಪ್ರಿಲ್ 30ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ತವಾಂಗ್‌ನಿಂದ ಇಟಾನಗರಕ್ಕೆ ತೆರಳುತ್ತಿದ್ದಾಗ, ರಾಜ್ಯದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಅವರ ಹೆಲಿಕಾಪ್ಟರ್ ಪತನಗೊಂಡಿತ್ತು.

ಸಿಡಿಎಸ್ ಜನರಲ್ ಬಿಪಿನ್ ರಾವತ್ (2021): ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿದ್ದ (CDS) ಜನರಲ್ ಬಿಪಿನ್ ರಾವತ್ ಅವರು 2021ರ ಡಿಸೆಂಬರ್ 8ರಂದು ಹೆಲಿಕಾಪ್ಟರ್ ದುರಂತದಲ್ಲಿ ಪ್ರಾಣ ಕಳೆದುಕೊಂಡರು. ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಈ ಘಟನೆಯಲ್ಲಿ ಅವರ ಪತ್ನಿ ಮತ್ತು ಇತರ 11 ಸಿಬ್ಬಂದಿ ಸಹ ಮೃತಪಟ್ಟಿದ್ದರು. ಸುಲೂರಿನಿಂದ ವೆಲ್ಲಿಂಗ್ಟನ್‌ಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿತ್ತು.

ವಿಜಯ್ ರೂಪಾನಿ (2025): ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು 2025ರ ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾದರು. ಬೋಯಿಂಗ್ 787-8 ಡ್ರೀಮ್‌ಲೈನರ್ (AI171) ನಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಾಗೂ ವಿಮಾನ ಅಪ್ಪಳಿಸಿದ ಹಾಸ್ಟೆಲ್ ಕಟ್ಟಡದಲ್ಲಿದ್ದ 20ಕ್ಕೂ ಹೆಚ್ಚು ಎಂಬಿಬಿಎಸ್ ವಿದ್ಯಾರ್ಥಿಗಳು ಸಹ ಈ ದುರಂತದಲ್ಲಿ ಜೀವ ಕಳೆದುಕೊಂಡರು.

Edited By : Nagaraj Tulugeri
PublicNext

PublicNext

28/01/2026 03:02 pm

Cinque Terre

33.45 K

Cinque Terre

0

ಸಂಬಂಧಿತ ಸುದ್ದಿ