ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಮುಂದುವರಿದಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರಿ ಸಂಚಲನ ಮೂಡಿಸಿದೆ. ಬಿಜೆಪಿ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಲೆಗೆ ಬ್ಯಾಂಡೇಜ್ ಹಾಕಿಕೊಂಡು ಆರೋಪಿಸುತ್ತಿದ್ದ ಮಹಿಳೆಯೊಬ್ಬರ ಬಣ್ಣ ಅನಿರೀಕ್ಷಿತವಾಗಿ ಬಯಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ತೃಣಮೂಲ ಕಾಂಗ್ರೆಸ್ (TMC) ಬೆಂಬಲಿಗ ಎನ್ನಲಾದ ಮಹಿಳೆಯೊಬ್ಬರು ತಲೆಗೆ ದೊಡ್ಡದಾಗಿ ಬ್ಯಾಂಡೇಜ್ ಸುತ್ತಿಕೊಂಡು ಮಾಧ್ಯಮಗಳ ಮುಂದೆ ಮಾತನಾಡುತ್ತಿರುತ್ತಾರೆ. "ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿ ತಲೆಗೆ ಗಾಯ ಮಾಡಿದ್ದಾರೆ" ಎಂದು ಅವರು ಗಂಭೀರ ಆರೋಪ ಮಾಡುತ್ತಿರುತ್ತಾರೆ.
ಆದರೆ, ಅಲ್ಲಿಯೇ ಇದ್ದ ಬಿಜೆಪಿ ಕಾರ್ಯಕರ್ತೆ ಎನ್ನಲಾದ ಮತ್ತೊಬ್ಬ ಮಹಿಳೆ, ಇದ್ದಕ್ಕಿದ್ದಂತೆ ಕ್ಯಾಮೆರಾ ಮುಂದೆಯೇ ಆಕೆಯ ತಲೆಯಲ್ಲಿದ್ದ ಬ್ಯಾಂಡೇಜ್ ಅನ್ನು ಬಿಚ್ಚಿದ್ದಾರೆ. ಆಶ್ಚರ್ಯವೆಂದರೆ, ಬ್ಯಾಂಡೇಜ್ ಬಿಚ್ಚಿದ ನಂತರ ಅಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ! ಗಾಯವೇ ಇಲ್ಲದೆ ಬ್ಯಾಂಡೇಜ್ ಹಾಕಿಕೊಂಡು ಸುಳ್ಳು ಹೇಳುತ್ತಿದ್ದ ಮಹಿಳೆಯ ನಾಟಕ ಕ್ಷಣಾರ್ಧದಲ್ಲಿ ಜಗತ್ತಿಗೆ ಗೊತ್ತಾಗಿದೆ.
ಈ 'ನಕಲಿ ಗಾಯ'ದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದು ಹಾಸ್ಯಮಯವಾಗಿದೆ ಎಂದರೆ, ಇನ್ನು ಕೆಲವರು ರಾಜಕೀಯ ಲಾಭಕ್ಕಾಗಿ ಇಂತಹ ನಾಟಕವಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿಡಿಯೋದ ಕೊನೆಯಲ್ಲಿ, ಸುಳ್ಳನ್ನು ಬಯಲು ಮಾಡಿದ ಮಹಿಳೆಯ ಮೇಲೆ ಟಿಎಂಸಿ ಬೆಂಬಲಿಗರು ಎನ್ನಲಾದ ಗುಂಪು ಹಲ್ಲೆ ನಡೆಸುತ್ತಿರುವ ದೃಶ್ಯವೂ ಇದೆ ಎನ್ನಲಾಗಿದೆ. "ಗಾಯವಿಲ್ಲದಿದ್ದರೂ ಬ್ಯಾಂಡೇಜ್ ಹಾಕಿಕೊಂಡಿದ್ದ ಮಹಿಳೆಯನ್ನು ಕಂಡು ಬಿಜೆಪಿ ಕಾರ್ಯಕರ್ತರು ಈಗ ನಿಜವಾಗಿ ಹೊಡೆದು ಕಳುಹಿಸಿದ್ದಾರೆ, ಈಗಲಾದರೂ ಜನ ನಿನ್ನನ್ನು ನಂಬುತ್ತಾರೆ ಎಂದು ಲೇವಡಿ ಮಾಡಿದ್ದಾರೆ" ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.
"ದೀದಿ (ಮಮತಾ ಬ್ಯಾನರ್ಜಿ) ಅವರ ಹಳೆಯ ಟ್ರಿಕ್ ಅನ್ನು ಈಕೆ ಪ್ರಯೋಗಿಸಲು ಹೋದಳು, ಆದರೆ ಪ್ಲಾನ್ ಉಲ್ಟಾ ಹೊಡೆಯಿತು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಸತ್ಯ ಬಯಲು ಮಾಡಿದ ಮಹಿಳೆಯ ಮೇಲೆ ಅರಾಜಕತಾವಾದಿಗಳು ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ" ಎಂದು ಮತ್ತೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದರೂ, ಈ ಘಟನೆ ಎಲ್ಲಿ ನಡೆದಿದೆ ಮತ್ತು ವಿಡಿಯೋದಲ್ಲಿರುವವರ ಅಸಲಿ ಗುರುತು ಏನು ಎಂಬುದು ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ. ರಾಜಕೀಯ ಸಂಘರ್ಷದ ನಡುವೆ ಇಂತಹ ವಿಡಿಯೋಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ.
PublicNext
06/05/2026 04:42 pm