ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ - ಸಿಇಸಿ ಕಟ್ಟುನಿಟ್ಟಿನ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ನಂತರ ಭುಗಿಲೆದ್ದಿರುವ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವವರನ್ನು ತಕ್ಷಣ ಬಂಧಿಸುವಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ತೀವ್ರ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಈ ಮಹತ್ವದ ಸೂಚನೆ ನೀಡಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ರಾಜ್ಯದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ರಾಜಕೀಯ ಪಕ್ಷಗಳ ಕಚೇರಿಗಳು ಲೂಟಿಯಾಗಿರುವ ಆರೋಪಗಳು ಕೇಳಿಬಂದಿವೆ. ಈ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ, ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಕೋಲ್ಕತ್ತಾ ಪೊಲೀಸ್ ಆಯುಕ್ತರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮಹಾನಿರ್ದೇಶಕರು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳಿಗೆ, ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ಗಸ್ತು ತಿರುಗುವಂತೆ ಸಿಇಸಿ ಸೂಚನೆ ನೀಡಿದ್ದಾರೆ.

"ಹಿಂಸಾಚಾರ ಪ್ರಚೋದನೆ ಹಾಗೂ ವಿಧ್ವಂಸಕ ಕೃತ್ಯಗಳಿಗೆ ಕಾರಣರಾಗಿರುವವರನ್ನು ತಕ್ಷಣ ಬಂಧಿಸಬೇಕು" ಎಂದು ಸಿಇಸಿ ತಮ್ಮ ನಿರ್ದೇಶನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಕಾನೂನನ್ನು ತ್ವರಿತವಾಗಿ ಮತ್ತು ದೃಢವಾಗಿ ಜಾರಿಗೊಳಿಸುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ. "ಯಾವುದೇ ಶಾಂತಿ ಕದಡುವ ಪ್ರಯತ್ನವನ್ನು ಹೆಚ್ಚಿನ ಜಾಗರೂಕತೆಯಿಂದ ಎದುರಿಸಲು ನಮಗೆ ಸೂಚಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು, ರಾಜ್ಯ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪಡೆಗಳು ಸಮನ್ವಯದಿಂದ ಕಾರ್ಯಾಚರಣೆ ನಡೆಸುತ್ತಿವೆ. ಜಿಲ್ಲೆಯಾದ್ಯಂತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಮೇ 4ರಂದು ಮತ ಎಣಿಕೆ ನಡೆದಿದ್ದು, 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಈ ಫಲಿತಾಂಶದೊಂದಿಗೆ ಟಿಎಂಸಿಯ 15 ವರ್ಷಗಳ ಆಡಳಿತ ಅಂತ್ಯಗೊಂಡಿದೆ.

Edited By : Nagaraj Tulugeri
PublicNext

PublicNext

06/05/2026 05:18 pm

Cinque Terre

4.98 K

Cinque Terre

0

ಸಂಬಂಧಿತ ಸುದ್ದಿ